ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿವರ್ಸ್ ತೆಗೆಯುತ್ತಿದ್ದ ಕಾರು ಹರಿದು ಹನ್ನೊಂದು ತಿಂಗಳ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ಮಗುವನ್ನು ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ.
ಕಾಮಾಕ್ಷಿಪಾಳ್ಯದಲ್ಲಿ ವಾಸಿಸುತ್ತಿರುವ ಸ್ವಾಮಿ ಎಂಬವರ ಮನೆಯಲ್ಲಿ ಕುಣಿಗಲ್ನಿಂದ ಬಂದಿದ್ದ ಅಝಾನ್ ಕುಟುಂಬವು ಕಳೆದ ವಾರದಿಂದ ಬಾಡಿಗೆಗೆ ವಾಸವಾಗಿತ್ತು. ಇವರ ಕುಟುಂಬದ ಮಗು ಉಮರ್ ಫಾರೂಕ್ ಮನೆಯ ಹೊರಗೆ ಆಟವಾಡುತ್ತಿತ್ತು. ಬೆಳಗ್ಗೆ ಮನೆ ಮಾಲೀಕ ಸ್ವಾಮಿ ತಮ್ಮ ಕಾರನ್ನು ಹೊರತೆಗೆಯುತ್ತಿದ್ದಾಗ ಮಗುವು ಕಾರಿನ ಹಿಂಭಾಗದಲ್ಲಿ ಆಟವಾಡುತ್ತಿತ್ತು. ಮಾಲೀಕರು ಮಗುವನ್ನು ಗಮನಿಸದೆ ಕಾರನ್ನು ರಿವರ್ಸ್ ತೆಗೆದುಕೊಂಡಿದ್ದರಿಂದ ಕಾರು ನೇರವಾಗಿ ಮಗುವ ಮೇಲೆ ಹರಿದಿದೆ. ಚಕ್ರಕ್ಕೆ ಸಿಲುಕಿ ಮಗು ಗಂಭೀರವಾಗಿ ಗಾಯಗೊಂಡಿತ್ತು.
ಸ್ಥಳೀಯರು ಮತ್ತು ಕುಟುಂಬದವರು ಮಗುವನ್ನು ತಕ್ಷಣವೇ ಸಮೀಪದ ಅನುಪಮಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಮಗುವು ಮೃತಪಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಪೊಲೀಸರು ಮನೆ ಮಾಲೀಕ ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮಾಲೀಕರು ಕಾರನ್ನು ರಿವರ್ಸ್ ತೆಗೆಯುವಾಗ ಸರಿಯಾಗಿ ಹಿಂದೆ ನೋಡದೆ ಇದ್ದುದು ದುರಂತಕ್ಕೆ ಕಾರಣವೆಂದು ಹೇಳಲಾಗಿದೆ.