Menu

ಪತಿ, ಮಕ್ಕಳಿದ್ದರೂ ಅಕ್ರಮ ಸಂಬಂಧ: ಪ್ರಿಯಕರನ ಜೊತೆ ತನ್ನ ಸ್ನೇಹಿತೆಯ ನೋಡಿ ಬಸವೇಶ್ವರ ನಗರದಲ್ಲಿ ಮಹಿಳೆ ಆತ್ಮಹತ್ಯೆ

ತನ್ನ ಆಪ್ತ ಸ್ನೇಹಿತೆಯೇ ತನ್ನ ಪ್ರಿಯಕರನ ಜೊತೆ ಸಂಬಂಧದಲ್ಲಿ ಇರುವುದನ್ನು ಕಂಡ ವಿವಾಹಿತ ಮಹಿಳೆಯೊಬ್ಬರು ಬೆಂಗಳೂರಿನ ಬಸವೇಶ್ವರ ನಗರದ ಕೆ ಹೆಚ್ ಬಿ ಕಾಲೊನಿಯಲ್ಲಿರುವ ಓಯೋ ಚಾಂಪಿನಿಯನ್ ಕಂಫರ್ಟ್ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದುವೆಯಾಗಿ ಇಬ್ಬರು ಮಕ್ಕಳಿರುವ ಯಶೋಧಾ (38) ಆತ್ಮಹತ್ಯೆ ಮಾಡಿಕೊಂಡವರು. ಆಕೆ ಇಬ್ಬರು ಮಕ್ಕಳಿದ್ದರೂ ಆಡಿಟರ್‌ ವಿಶ್ವನಾಥ್‌ ಎಂಬವರ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಆಡಿಟರ್‌ ವಿಶ್ವನಾಥ್‌ ಜೊತೆಗೆ ಸ್ನೇಹ ಹೊಂದಿರುವ ಬಗ್ಗೆ ಯಶೋಧಾ ತನ್ನ ಗೆಳತಿಗೆ ತಿಳಿಸಿ ಆಡಿಟರ್‌ಗೆ ಪರಿಚಯ ಮಾಡಿಸಿದ್ದಳು. ಯಶೋಧಾಳ ಸ್ನೇಹಿತೆಯ ಪರಿಚಯ ಆದ ಬಳಿಕ ವಿಶ್ವನಾಥ ಆಕೆಯೊಂದಿಗೂ ಸಂಬಂಧ ಬೆಳೆಸಿದ್ದ. ಇದನ್ನು ಕಣ್ಣಾರೆ ಕಂಡ ಯಶೋಧಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಶೋಧಾ- ವಿಶ್ವನಾಥ್‌ ಏಳು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದರು. ಇತ್ತೀಚೆಗೆ ವಿಶ್ವನಾಥ ಯಶೋಧಾಳ ಸ್ನೇಹಿತೆ ಜೊತೆ ಕದ್ದು ಮುಚ್ಚಿ ತಿರುಗಾಡುತ್ತಿದ್ದ. ಇದು ಯಶೋಧಾಗೆ ಗೊತ್ತಾಗಿದೆ. ಶನಿವಾರ ರಾತ್ರಿ ವಿಶ್ವನಾಥ್‌ ಹಾಗೂ ತನ್ನ ಸ್ನೇಹಿತೆ ಬಸವೇಶ್ವರ ನಗರದ ಕೆ ಹೆಚ್ ಬಿ ಕಾಲೋನಿಯಲ್ಲಿ ಓಯೋ ಚಾಂಪಿನಿಯನ್ ಕಂಫರ್ಟ್ ಲಾಡ್ಜ್ ನಲ್ಲಿರುವುದು ಆಕೆಗೆ ಗೊತ್ತಾಗಿದೆ. ಯಶೋಧಾ ಲಾಡ್ಜ್​ ಗೆ ತೆರಳಿ ನೋಡಿದಾಗ ಇಬ್ಬರು ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಗಲಾಟೆ ಮಾಡಿ ಆಡಿಟರ್‌ ಮತ್ತು ಸ್ನೇಹಿತೆ ತಂಗಿದ್ದ ರೂಮ್‌ ಪಕ್ಕದಲ್ಲೇ ಮತ್ತೊಂದು ರೂಮ್‌ ಬುಕ್‌ ಮಾಡಿ ಅಲ್ಲೇ ಫ್ಯಾನ್‌ಗೆ  ವೇಲ್‌ನಿಂದ ನೇಣು ಬಿಗಿದುಕೊಂಡು ಯಶೋಧಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವಲ್ಪ ಸಮಯದ ಬಳಿಕ ವಿಶ್ವನಾಥ್‌ಗೆ ಮೊಬೈಲ್‌ ಕರೆ ಬಂದಿದೆ. ಆತ ರೂಮ್‌ನಿಂದ ಹೊರಗೆ ಬಂದು ಪಕ್ಕದ ರೂಮ್‌ನ ಬಾಗಿಲು ತಳ್ಳಿ ನೋಡಿದಾಗ ಯಶೋಧಾ ಆತಹತ್ಯೆ ಮಾಡಿಕೊಂಡಿರುವುದು ನೋಡಿ ನೇಣಿನಿಂದ ಆಕೆಯನ್ನು ಕೆಳಗೆ ಇಳಿಸಿ ಲಾಡ್ಜ್​​ ನವರಿಗೆ ವಿಷಯ ತಿಳಿಸಿದ್ದಾರೆ.

ಲಾಡ್ಜ್‌ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಮಾಗಡಿ ರಸ್ತೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಶೋಧಾ ಅವರ ಪತಿ ವಿಷಯ ತಿಳಿದು ಪತ್ನಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *