“ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಪ್ರೇತಾತ್ಮ” ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ನಾಗಮಂಗಲದ ಗೋಪಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವೀವ್ಸ್‌ಗಾಗಿ ದೆವ್ವದ ಫೇಕ್ ವೀಡಿಯೊ ಶೇರ್ ಮಾಡಿರುವುದಾಗಿ ಆತ ಮಂಡ್ಯದ ಪೊಲೀಸ್ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ.
ನಾಗಮಂಗಲದಲ್ಲಿ ಬೈಕ್ ಸವಾರನಿಗೆ ಕಾಣಿಸಿಕೊಂಡಿತ್ತು ಎನ್ನಲಾದ ದೆವ್ವದ ವೀಡಿಯೊ ವೈರಲ್ ಆಗಿತ್ತು. ವೀಡಿಯೊ ನೋಡಿ ಆ ರಸ್ತೆಯಲ್ಲಿ ದೆವ್ವ ಇದೆ ಎಂದು ಜನರು ಓಡಾಡಲು ಹೆದರುತ್ತಿದ್ದರು. ವಿಷಯ ತಿಳಿದ ಮಂಡ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ವೀಡಿಯೊದ ನೈಜ ವಿಷಯ ಬಯಲಾಗಿದೆ.
ನಾಗಮಂಗಲ ಟೌನ್ ನಿವಾ ಗೋಪಿ ಎಂಬ ವ್ಯಕ್ತಿಯು ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಪ್ರೇತಾತ್ಮ ಎಂಬ ಶೀರ್ಷಿಕೆಯಡಿ ವೀಡಿಯೊವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ. ಪೊಲೀಸರು ಫ್ಯಾಕ್ಟ್‌ಚೆಕ್ ಮಾಡಿದಾಗ ಗೋಪಿಯು ಲೈಕ್ಸ್, ವೀವ್ಸ್‌ಗಾಗಿ ಫೇಕ್ ವೀಡಿಯೊ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರು ಯುವಕನ ತಪ್ಪೊಪ್ಪಿಗೆಯ ವೀಡಿಯೊ ರೆಕಾರ್ಡ್ ಮಾಡಿ ಅದನ್ನು ಪೋಸ್ಟ್ ಮಾಡಿ ಈ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ನಕಲಿ ವೀಡಿಯೊಗಳನ್ನು ನಂಬದಂತೆ, ವೃಥಾ ಆತಂಕ ಮತ್ತು ಭಯಕ್ಕೆ ಒಳಗಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.