ಹಾಸನ: 22 ವರ್ಷದ ಯುವತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸಂಭವಿಸಿದೆ.
ಹೊಳೆನರಸೀಪುರ ತಾಲ್ಲೂಕಿನ, ಕಟ್ಟಳ್ಳಿ ಗ್ರಾಮದ ನಿವಾಸಿ ಕೃಷ್ಣಮೂರ್ತಿ-ರೂಪ ದಂಪತಿಯ ಪುತ್ರಿ ಸುಪ್ರಿಯಾ (22) ಮೃತಪಟ್ಟ ಯುವತಿ. ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾದಂತಾಗಿದೆ.
ಬುಧವಾರ (ಜೂ.25) ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಪೋಷಕರಿಗೆ ಹೇಳುತ್ತಿದ್ದಂತೆ ಕುಸಿದು ಬಿದ್ದಿದ್ದಾಳೆ. ತಕ್ಷಣ ಪೋಷಕರು ಸುಪ್ರಿಯಾಳನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಸುಪ್ರಿಯಾ ಸಾವನ್ನಪ್ಪಿದ್ದಾಳೆ.
ಕುಟುಂಬಸ್ಥರು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದು, ಮುಕ್ತ ವಿವಿಯಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದ ಸುಪ್ರಿಯಾ ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡುತ್ತಿದ್ದಳು.
ಹಾಸನದಲ್ಲಿ ಯುವ ಸಮುದಾಯ ಹೃದಯಾಘಾತದಿಂದ ಅಕಾಲಿಕ ಸಾವಿಗೀಡಾಗುತ್ತಿರುವ ಬಗ್ಗೆ ತಜ್ಞರಿಂದ ಮಾಹಿತಿ ಪಡೆದಿದ್ದು, ಕೊರೊನಾ ಲಸಿಕೆ ಕಾರಣವಲ್ಲ ಎಂದು ವರದಿ ಬಂದಿತ್ತು.