ರಾಮನಗರದ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಹೆಸರಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುರೇಗಪ್ಪ ಬಂಧಿತ ಆರೋಪಿ. ಮುರೇಗಪ್ಪ ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಮಾಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಈ ಸಂಬಂಧ ಸಿಡಿಪಿಒ ಅಧಿಕಾರಿ ಸುರೇಂದ್ರ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಐಜೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಮುರೇಗಪ್ಪ ಮೇಲೆ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಯಿಂದ ಮೂರು ಮೊಬೈಲ್ ಹಾಗೂ ಒಂಬತ್ತಕ್ಕೂ ಹೆಚ್ಚು ಸಿಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುರೇಗಪ್ಪ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಲೋಕಾಯಕ್ತ ಅಧಿಕಾರಿ ಎಂದು ಬೆದರಿಕೆ ಹಾಕಿ ಹಣ ವಂಚಿಸಿದ್ದ. ಮುರೇಗಪ್ಪ ಎಂಟು ವರ್ಷ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸಿದ್ದ. ಎರಡು ವರ್ಷ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸಿ ಸಸ್ಪೆಂಡ್ ಆಗಿದ್ದ. ಬಳಿಕ ಬೆದರಿಸಿ ಹಣ ವಂಚಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಆರೋಪಿಯನ್ನು ಬಂಧಿಸಿರುವ ಐಜೂರು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.