ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತದ ಟಿ-20 ಮತ್ತು ಏಕದಿನ ತಂಡಗಳನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಅಳೆದು ತೂಗಿ ಅಕ್ಟೋಬರ್ 19ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದೆ. ಟೆಸ್ಟ್ ಹಾಗೂ ಟಿ-20ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಏಕದಿನ ತಂಡಕ್ಕೆ ಮರಳಿದ್ದಾರೆ.
ಶುಭಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕನಾಗಿ ಘೋಷಿಸಲಾಗಿದ್ದು, ಶ್ರೇಯಸ್ ಅಯ್ಯರ್ ಗೆ ಉಪನಾಯಕನಾಗಿ ಬಡ್ತಿ ನೀಡಲಾಗಿದೆ. ಏಷ್ಯಾಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮ ಅವರನ್ನು ಏಕದಿನ ತಂಡಕ್ಕೆ ಪರಿಗಣಿಸಲಾಗಿಲ್ಲ.
ರೋಹಿತ್ ಶರ್ಮ ಗೆ ನಾಯಕ ಪಟ್ಟದಿಂದ ಕೊಕ್ ನೀಡಲಾಗಿದೆ. ಈ ಮೂಲಕ ರೋಹಿತ್ ಶರ್ಮ ಯಾವುದೇ ತಂಡದ ನಾಯಕನಾಗಿ ಇನ್ನು ಮುಂದೆ ಇರುವುದಿಲ್ಲ. ಅಲ್ಲದೇ 2027ರ ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಅನುಮಾನ ಉಂಟಾಗಿದೆ.
ಮಧ್ಯಮ ವೇಗಿ ಮೊಹಮದ್ ಶಮಿ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಈಗಾಗಲೇ 35 ವರ್ಷ ಆಗಿರುವ ಶಮಿ ಅವರನ್ನು ಕಾಯಂ ಆಗಿ ತಂಡದಿಂದ ಕೈಬಿಡಲಾಗಿದೆ ಎಂದು ಮೂಲಗಳು ಹೇಳಿದ್ದು, ಈ ಬಗ್ಗೆ ಆಯ್ಕೆದಾರರು ಯಾವುದೇ ಸ್ಪಷ್ಟ ಉತ್ತರ ನೀಡದೇ ಜಾರಿಕೊಂಡಿದ್ದಾರೆ.
ಜಸ್ ಪ್ರೀತ್ ಬುಮ್ರಾಗೆ ಏಕದಿನ ತಂಡದಿಂದ ವಿಶ್ರಾಂತಿ ನೀಡಲಾಗಿದ್ದು, ಟಿ-20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಕರ್ನಾಟಕದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ, ಧ್ರುವ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹಾರ್ದಿಕ್ ಔಟ್, ನಿತೀಶ್ ಕುಮಾರ್ ಗೆ ಸ್ಥಾನ
ಭಾರತ ಟಿ-20 ತಂಡಕ್ಕೆ ಸೂರ್ಯಕುಮಾರ್ ನಾಯಕರಾಗಿ ಮುಂದುವರಿದಿದ್ದು, ಶುಭಮನ್ ಗಿಲ್ ಗೆ ಉಪನಾಯಕ ಸ್ಥಾನ ನೀಡಲಾಗಿದೆ. ಗಾಯಗೊಂಡ ಹಾರ್ದಿಕ್ ಪಾಂಡ್ಯ ಬದಲಿಗೆ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಂಡ ಸ್ಥಾನ ಪಡೆದಿದ್ದಾರೆ.
ಭಾರತ ಏಕದಿನ ತಂಡ:
ಶುಭಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣ, ಮೊಹಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಧ್ರುವ ಜುರೆಲ್, ಯಶಸ್ವಿ ಜೈಸ್ವಾಲ್.
ಭಾರತ ಟಿ-20 ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮ, ತಿಲಕ್ ವರ್ಮಾ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮ (ವಿ.ಕೀ.), ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.