ಶಾಲಾ ಶಿಕ್ಷಕಿಯೊಬ್ಬರು ಪ್ರಾಂಶುಪಾಲನ ಜೊತೆ ಸ್ನೇಹ ಬೆಳೆಸಿದ್ದು ಅದು ಸಂಬಂಧಕ್ಕೆ ತಿರುಗಿದ್ದನ್ನು ವಿರೋಧಿಸಿದ ಮಗನನ್ನೇ ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾದ ಗ್ರಾಮೀಣ ಜಿಲ್ಲೆಯಲ್ಲಿ ನಡೆದಿದೆ.
ಶಿಕ್ಷಕಿ ರೋಮಾಕುಮಾರಿ (32) ಶಾಲಾ ಪ್ರಾಂಶುಪಾಲ ನಿರ್ಮಲ್ ಪಾಸ್ವಾನ್ ಜೊತೆ ಸೇರಿ ತನ್ನ 12 ವರ್ಷದ ಮಗ ಶ್ರೇಯಾಂಸ್ನನ್ನು ಕೊಂದಿದ್ದಾಳೆ. ರೋಮಾಕುಮಾರಿ ಅರಾ ಜಿಲ್ಲೆಯ ನಿವಾಸಿಯಾಗಿದ್ದು, ರೋಹಟಸ್ನ ಪ್ರೈಮರಿ ಟೀಚರ್ಸ್ ಟ್ರೇನಿಂಗ್ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜಿನ ಪ್ರಾಂಶುಪಾಲ ನಿರ್ಮಲ್ ಪಾಸ್ವಾನ್ ಪರಿಚಯವಾಗಿತ್ತು. ರೋಮಾಕುಮಾರಿ ನಿರ್ಮಲ್ ಪಾಸ್ವಾನ್ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು.
ಈ ಸಂಬಂಧಕ್ಕೆ ಆಕೆಯ 12 ವರ್ಷದ ಮಗ ಶ್ರೇಯಾಂಸ್ ವಿರೋಧ ವ್ಯಕ್ತಪಡಿಸಿದ್ದ. ನಿರ್ಮಲ್ ಪಾಸ್ವಾನ್ ಮನೆಗೆ ಬರುವುದನ್ನು ಮಗ ತಡೆಯಲು ಪ್ರಯತ್ನಿಸಿದ್ದ.
ಜೂನ್ 15ರಂದು ಕೋನಹಾರ್ ಸೇತುವೆ ಬಳಿ ಅರೆಬೆಂದ ಸ್ಥಿತಿಯಲ್ಲಿ ಶ್ರೇಯಾಂಸ್ನ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ, ರೋಮಾ ಕುಮಾರಿಯ ಅನೈತಿಕ ಸಂಬಂಧ ಮತ್ತು ಮಗನ ವಿರೋಧದ ಕುರಿತು ತಿಳಿದು ಬಂದಿದೆ.
ಪ್ರಕರಣದಲ್ಲಿ ರೋಮಾಕುಮಾರಿಯನ್ನು ಬಂಧಿಸಿದ್ದು, ಪ್ರಾಂಶುಪಾಲ ನಿರ್ಮಲ್ ಪಾಸ್ವಾನ್ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸ್ಥಳೀಯರು ಈ ಕೃತ್ಯವನ್ನು ಖಂಡಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.