ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಎಫ್-16 ಮತ್ತು ಜೆ-17 ಅಂತಹ ಪ್ರಮುಖ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್ ಹೇಳಿದ್ದಾರೆ.
ಭಾರತ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಕಳೆದ ಆಗಸ್ಟ್ ನಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮತ್ತಷ್ಟು ವಿವರಗಳನ್ನು ಶುಕ್ರವಾರ ಬಹಿರಂಗಪಡಿಸಿದರು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 6 ಏರ್ ಕ್ರಾಫ್ಟ್, 5 ಫೈಟರ್ ಜೆಟ್, ದಾಳಿಯ ಮುನ್ಸೂಚನೆ ನೀಡುವ ಅತೀ ದೊಡ್ಡ ಬಿಗ್ ಬರ್ಡ್ ಖ್ಯಾತಿಯ ಎಇಡಬ್ಲ್ಯೂಅಂಡ್ ಸಿ ಹೊಡೆದುರುಳಿಸಿದ್ದೇವೆ ಎಂದು ಅವರು ಹೇಳಿದರು.
ಭಾರತದ ಕ್ಷಿಪಣಿಗಳು ಪಾಕಿಸ್ತಾನದ ರಾಡರ್ ವ್ಯವಸ್ಥೆಯನ್ನು ಧ್ವಂಸಗೊಳಿಸಿದವು. ಕಮಾಂಡ್ ಅಂಡ್ ಕಂಟ್ರೋಲ್ ವ್ಯವಸ್ಥೆಯನ್ನು ನಾಶಗೊಳಿಸಿದವು. ಅಲ್ಲದೇ ಹಲವು ಮಹತ್ವದ ಸೇನಾ ಮೂಲಭೂತ ಸೌಕರ್ಯಗಳನ್ನು ಹಾನಿಗೊಳಿಸಲಾಗಿದೆ. ಅಮೆರಿಕದ ಸರಕು ಸಾಗಾಟ ವಿಮಾನ `ಹರ್ಕ್ಯೂಲಸ್’ ಕೂಡ ಪತನಗೊಂಡಿರುವ ಶಂಕೆ ಇದೆ ಎಂದು ಎಪಿ ಸಿಂಗ್ ವಿವರಿಸಿದ್ದಾರೆ.
ಪಾಕಿಸ್ತಾನ ಯುದ್ಧದ ಆರಂಭದಲ್ಲೇ ನಿಯಂತ್ರಣ ಕಳೆದುಕೊಳ್ಳುವಂತೆ ವಾಯುನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಮೂರು ವಾಯುನೆಲೆಗಳ ಹ್ಯಾಂಗರ್ಸ್ ಗಳಿಗೆ ಹಾನಿ ಮಾಡಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.