Wednesday, October 08, 2025
Menu

ಮಳೆ ಹಾನಿ: ಕುಷ್ಕಿ ಎಕರೆಗೆ 25,000 ರೂ. ನೀರಾವರಿ ಜಮೀನಿಗೆ ಎಕರೆಗೆ 50,000 ರೂ. ಪರಿಹಾರ ನೀಡಿ

ಮಳೆ ಹಾನಿಗೊಂಡ ಕುಷ್ಕಿ ಎಕರೆಗೆ 25,000 ರೂ. ನೀರಾವರಿ ಜಮೀನಿಗೆ ಎಕರೆಗೆ 50,000 ರೂ. ಪರಿಹಾರ ನೀಡಬೇಕು. ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ನೀಡಿದರೂ ರೈತರು ಖರ್ಚು ಮಾಡಿದಷ್ಟಾದರೂ ನೀಡಲಿ. ಸರ್ಕಾರವೇ ಕಳಪೆ ಬೀಜ ನೀಡಿದೆ ಎಂದು ರೈತರು ಹೇಳಿರುವುದಾಗಿ ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದ್ದಾರೆ.

ಉತ್ತರ ಕರ್ನಾಟಕದಲ್ಲಿ ವಿವಿಧೆಡೆ ಮಳೆ ಹಾನಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಹಾನಿ ಪ್ರದೇಶಗಳಿ ಸಚಿವರು, ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಎಲ್ಲರೂ ಜಾತಿ ಸಮೀಕ್ಷೆಯಲ್ಲಿ ಹಾಗೂ ಸಿಎಂ ಬದಲಾವಣೆಯ ಕ್ರಾಂತಿಯಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನೂ ಸೇರಿದಂತೆ ಬಿಜೆಪಿ ನಾಯಕರು ಪ್ರವಾಹವಾದ ಕಡೆಗಳಲ್ಲಿ ಪ್ರವಾಸ ಮಾಡಿದ್ದೇವೆ. ಆದರೆ ಸರ್ಕಾರದ ವತಿಯಿಂದ ಯಾರೂ ಪ್ರವಾಸ ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ ಹಾನಿಯಾದಾಗ, ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಬೆಳೆ ಪರಿಹಾರ ಹಾಗೂ ಮನೆ ಹಾನಿ ಪರಿಹಾರವನ್ನು ಡಬಲ್‌ ಮಾಡಲಾಗಿತ್ತು. ಮನೆ ಬಾಗಿಲಿಗೆ ನೀರು ಬಂದರೂ 24 ಗಂಟೆಯೊಳಗೆ ಪರಿಹಾರ ನೀಡಲಾಗಿತ್ತು. ಜೊತೆಗೆ ಪ್ರತಿ ಮನೆಗೆ ಆಹಾರ ಕಿಟ್‌ಗಳನ್ನು ನೀಡಲಾಗಿತ್ತು. ಕೇಂದ್ರ ಸರ್ಕಾರಕ್ಕೆ ಕಾಯದೆ ರಾಜ್ಯ ಸರ್ಕಾರದಿಂದಲೇ ಪರಿಹಾರ ವಿತರಣೆ ಮಾಡಲಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಇನ್ನೂ ಮಳೆ ಹಾನಿ ಸಮೀಕ್ಷೆಗೆ ಕಾಯುತ್ತಿದ್ದಾರೆ ಎಂದರು.

ಸರ್ಕಾರವೀಗ ಜಾತಿ ಸಮೀಕ್ಷೆಯಲ್ಲಿ ನಿರತವಾಗಿದೆ. ಅಧಿಕಾರಿಗಳು ಅದರಲ್ಲೇ ಇದ್ದಾರೆ. ಹಾಗಾಗಿ ಯಾರೂ ಪ್ರವಾಹ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ. ಬೆಳೆ ಹಾನಿಯಾದ ಕೂಡಲೇ ನವದೆಹಲಿಗೆ ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದೆವು. ಈಗ ಕಾಂಗ್ರೆಸ್‌ನ ಯಾವುದೇ ಸಚಿವರು ದೆಹಲಿಗೆ ಹೋಗಿ ಭೇಟಿ ಮಾಡುತ್ತಿಲ್ಲ. ಸಿಎಂ ಬದಲಾವಣೆ ಯಾವಾಗ ಎಂದು ಚರ್ಚೆಯಾಗುತ್ತಿದೆ. ಶಾಸಕರು ನಾನೇ ಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ವತಿಯಿಂದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ. ಮನೆ ಹಾನಿ, ರಸ್ತೆ ಹಾನಿ, ಬೆಳೆ ಹಾನಿ ಮೊದಲಾದವನ್ನು ಪರಿಶೀಲಿಸಲಾಗಿದೆ. ಜನರು ಬೀದಿಗೆ ಬಂದು ನಿಲ್ಲುವ ಸ್ಥಿತಿ ಬಂದಿದೆ. ಈ ಸರ್ಕಾರಕ್ಕೆ ಜನರ ಸಂಕಷ್ಟ ಅರಿವಿಗೆ ಬರುತ್ತಿಲ್ಲ. ಮಳೆ ಹಾನಿಯಾದಾಗ ಅದರ ವರದಿ ಪಡೆಯಬೇಕು. ಎಲ್ಲಿ ಎಷ್ಟು ಹಾನಿಯಾಗಿದೆ ಎಂದು ತಿಳಿದು, ಮುಖ್ಯಮಂತ್ರಿಗಳು ಸಚಿವರ ಜೊತೆ ಚರ್ಚಿಸಿ ತಂಡಗಳನ್ನು ಪ್ರತಿ ಜಿಲ್ಲೆಗಳಿಗೆ ಕಳುಹಿಸಬೇಕು. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡಕ್ಕೆ, ರಾಜ್ಯಕ್ಕೆ ಭೇಟಿ ಮಾಡಲು ಹೇಳಬೇಕು. ಸಚಿವರಿಗೆ ಕೆಲಸ ಕೊಡದೆ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ತೋರಿದ್ದಾರೆ. ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆಯೇ ಹೊರತು, ಯಾವ ಕ್ರಮ ಕೈಗೊಂಡಿದ್ದೇನೆ ಎನ್ನುತ್ತಿಲ್ಲ ಎಂದರು.

ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಯಾಬೀನ್‌ ಬೆಳೆ ಹಾನಿ ವೀಕ್ಷಿಸಲಾಗಿದೆ. ಸರ್ಕಾರ ಬದುಕಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗಿ ಚರ್ಚಿಸಬೇಕಿತ್ತು. ಮೊದಲು ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದ ಬಳಿಕ, ಕೇಂದ್ರ ಸರ್ಕಾರ ಪರಿಹಾರ ನೀಡುತ್ತದೆ. ಇದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದರೂ ಪ್ರಯೋಜನವಿಲ್ಲ. ರೈತರ ಜೊತೆ ನಿಂತು ಹೆಚ್ಚು ಪರಿಹಾರ ನೀಡುತ್ತೇನೆ ಎನ್ನಬೇಕಿತ್ತು. ಗ್ಯಾರಂಟಿಯೂ ಕೊಡಲ್ಲ, ಪರಿಹಾರವೂ ಇಲ್ಲ ಎಂಬಂತಾಗಿದೆ ಎಂದು ಟೀಕಿಸಿದರು.

ನವೆಂಬರ್‌ನಲ್ಲಿ ಸಿಎಂ ಬದಲಾವಣೆಯಾಗಲಿದೆ ಎಂದು ನಾನು ಹೇಳಿದ್ದೆ. ಕ್ರಾಂತಿಯಾಗಲಿದೆ ಎಂದಿದ್ದ ರಾಜಣ್ಣ ಮನೆಗೆ ಹೋಗಿದ್ದಾರೆ. ಸಿಎಂ ಬದಲಾವಣೆ ಒಪ್ಪಂದ ಆಗಿರುವುದು ನೂರಕ್ಕೆ ನೂರು ನಿಜ. ಸಿಎಂ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವು ದಿಲ್ಲ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಠ ಬಿಡುವುದಿಲ್ಲ. ಆದರೆ ಬಿಜೆಪಿಯಿಂದ ಸರ್ಕಾರ ರಚನೆ ಮಾಡುವುದಿಲ್ಲ. ಚುನಾವಣೆ ನಡೆಯುವುದೇ ಸೂಕ್ತ ಎನ್ನುವುದು ನಮ್ಮೆಲ್ಲರ ಅಭಿಪ್ರಾಯ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಸ್ತೆಗಳು ಗುಂಡಿ ಬಿದ್ದಿವೆ. ಬೆಂಗಳೂರಿನಲ್ಲಿ ಹಳ್ಳ ಇಲ್ಲದ ರಸ್ತೆಯೇ ಇಲ್ಲ. ಇಂತಹ ಪರಿಸ್ಥಿತಿ ಈಗ ಇದೆ ಎಂದರು.

Related Posts

Leave a Reply

Your email address will not be published. Required fields are marked *