ಕೋಲಾರದ ಮಾಲೂರಿನ ದೊಡ್ಡಿಗ್ಗಲೂರು ಗ್ರಾಮದಲ್ಲಿ ಎಂಟು ವರ್ಷದ ಬಾಲಕಿ ಈ ನಕಲಿ ವೈದ್ಯರ ಚಿಕಿತ್ಸೆಗೆ ಪ್ರಾಣ ಕಳೆದುಕೊಂಡಿದ್ದಾಳೆ. ಜ್ವರ ಎಂದು ಆಸ್ಪತ್ರೆಗೆ ಹೋದ ಮಗುವಿಗೆ ನೀಡಿದ ಇಂಜೆಕ್ಷನ್ನಿಂದಲೇ ಮಗು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಗೆ ಚಿಕಿತ್ಸೆ ನೀಡಿದವರು ನಕಲಿ ವೈದ್ಯರೆಂದು ಹೇಳಲಾಗುತ್ತಿದೆ.
ಬಾಲಕಿ ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ಸಂತೆಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕ್ಲಿನಿಕ್ನಲ್ಲಿ ನೀಡಿದ ಇಂಜೆಕ್ಷನ್ನಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.
ಮೂರು ವರ್ಷಗಳ ಹಿಂದೆ ಕೋಲಾರ ಜಿಲ್ಲೆಯಲ್ಲಿ 3 ಕ್ಲಿನಿಕ್‌ಗಳ ಮೇಲೆ ತಹಶೀಲ್ದಾರರು ದಾಳಿ ಮಾಡಿದ್ದರು. ಸೂಕ್ತ ದಾಖಲೆಗಳಿಲ್ಲದ ಕಾರಣ ನಕಲಿ ವೈದ್ಯರ 3 ಕ್ಲಿನಿಕ್ಗಳನ್ನೂ ಮುಚ್ಚಿದ್ದರು. ಬೆಂಗಳೂರು, ಕಲಬುರಗಿ, ಬೆಳಗಾವಿ ಸೇರಿದಂತೆ 100 ಕ್ಕೂ ಹೆಚ್ಚು ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಿ ಕೆಲವು ಕ್ಲಿನಿಕ್ಗಳಿಗೆ ಬೀಗ ಹಾಕಲಾಗಿತ್ತು. ಆದರೂ ರಾಜ್ಯದಲ್ಲಿ ನಕಲಿ ವೈದ್ಯರು ಮತ್ತು ಕ್ಲಿನಿಕ್‌ಗಳ ದಂಧೆ ನಿರಾತಂಕವಾಗಿ ಮುಂದುವರಿಯುತ್ತಿದೆ.
ಯಾವುದೇ ಯಾವುದೇ ವೈದ್ಯಕೀಯ ಪದವಿಯಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನಕಲಿ ವೈದ್ಯ ಮಾಲೂರಿನ ಬಾಲಕಿಯ ಪ್ರಾಣಕ್ಕೆ ಎರವಾಗಿರುವುದು ದುರಂತ.