ಜನ ವಿಶ್ವಾಸ್ (ತಿದ್ದುಪಡಿ) ಮಸೂದೆ-2055 ಪರಿಶೀಲನೆಗಾಗಿ ರಚನೆಯಾಗಿರುವ ಸಂಸದೀಯ ಸ್ಥಾಯಿ ಸಮಿತಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮಸೂದೆಯನ್ನು ಆಗಸ್ಟ್ 18-2025 ರಂದು ಸ್ಥಾಯಿ ಸಮಿತಿಗೆ ವಹಿಸಲಾಗಿತ್ತು. ತೇಜಸ್ವಿ ಸೂರ್ಯ ಅಧ್ಯಕ್ಷತೆಯಲ್ಲಿ ಸಮಿತಿಯು ಮಸೂದೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ವರದಿ ಸಲ್ಲಿಸಲಿದೆ.
ಬ್ಯಾಂಕ್ ದಿವಾಳಿತನ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ರಚಿಸಲಾದ ಸಮಿತಿಗೆ ಬಿಜೆಪಿಯ ಹಿರಿಯ ನಾಯಕ ಶ್ರೀ ಬೈಜಯಂತ್ ಪಾಂಡಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ನೇತೃತ್ವ ಶಶಿ ಥರೂರ್ ಅವರನ್ನು ವಿದೇಶ ವ್ಯವಹಾರಕ್ಕೆ ಸಂಬಂಧಿಸಿದ ಸಮಿತಿಗೆ ಮರುನೇಮಕ ಮಾಡಲಾಗಿದೆ.
ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಸ್ವಯಂಚಾಲಿತ ಪದಚ್ಯುತಿ ನಿಯಮದ ಪ್ರಸ್ತಾವನೆಯನ್ನು ಹೊಂದಿರುವ ಇನ್ನೊಂದು ಮಸೂದೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ ರಚನೆಗೆ ವಿರೋಧ ಪಕ್ಷಗಳು ಇನ್ನೂ ಸಹರಿಸಿಲ್ಲ. ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಕೆಲವು ಪಕ್ಷಗಳು ಈಗಾಗಲೇ ಜೆಪಿಸಿಯನ್ನು ಬಹಿಷ್ಕರಿಸಿವೆ.
ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಆಗಸ್ಟ್‌ನಲ್ಲಿ ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ 2025 ಮಂಡಿಸಿದ್ದು, ಇದು ಸಣ್ಣ ಅಪರಾಧಗಳಿಗೆ ಸಂಬಂಧಿಸಿದ 288 ನಿಬಂಧನೆಗಳ ಅಪರಾಧ ಮುಕ್ತಗೊಳಿಸುವಿಕೆಯನ್ನು ಪ್ರಸ್ತಾಪಿಸುತ್ತದೆ. 2025 ರ ಮಸೂದೆಯ 183 ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಲಾದ 2023 ರ ಜನ್ ವಿಶ್ವಾಸ್ ಕಾಯ್ದೆಯನ್ನು ಆಧರಿಸಿ ರೂಪಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಸಣ್ಣ, ತಾಂತ್ರಿಕ ಅಥವಾ ಕಾರ್ಯವಿಧಾನದ ತಪ್ಪುಗಳಿಗೆ ಜೈಲು ಶಿಕ್ಷೆ ವಿಧಿಸುವ ಷರತ್ತುಗಳನ್ನು ತೆಗೆದುಹಾಕುವುದು ಈ ಪ್ರಸ್ತಾವನೆಗಳಲ್ಲಿ ಸೇರಿದೆ ಮತ್ತು ಅವುಗಳನ್ನು ವಿತ್ತೀಯ ದಂಡಗಳು ಅಥವಾ ಎಚ್ಚರಿಕೆಗಳೊಂದಿಗೆ ಬದಲಾಯಿಸಲಾಗಿದೆ ಎಂದು ಸರ್ಕಾರ ಹೇಳಿದೆ. ನ್ಯಾಯಾಂಗ ಹೊರೆಯನ್ನು ಕಡಿಮೆ ಮಾಡಲು, ಗೊತ್ತುಪಡಿಸಿದ ಅಧಿಕಾರಿಗಳಿಗೆ ಆಡಳಿತಾತ್ಮಕ ಪ್ರಕ್ರಿಯೆಗಳ ಮೂಲಕ ದಂಡ ವಿಧಿಸಲು ಅಧಿಕಾರ ನೀಡಲಾಗಿದೆ.