ಹೊಸಪೇಟೆ ಹೊರವಲಯದಲ್ಲಿ ವಂಚಕರ ಗ್ಯಾಂಗೊಂದು 5.20 ಕೋಟಿ ರೂ. ಇನ್ಶೂರೆನ್ಸ್ ಹಣವನ್ನು ಪಡೆದುಕೊಳ್ಳುವ ಸಂಚು ರೂಪಿಸಿ ಅದಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿದ ಘಟನೆ ನಡೆದಿದ್ದು, ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಹೊಸಪೇಟೆ ಕೌಲ್ ಪೇಟೆಯ ನಿವಾಸಿ ಗಂಗಾಧರ ಕೊಲೆಯಾಗಿರುವ ವ್ಯಕ್ತಿ. ಕೊಪ್ಪಳ ಜಿಲ್ಲೆಯ ಕೃಷ್ಣಪ್ಪ, ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಅಜೇಯ, ರಿಯಾಜ್, ಯೋಗರಾಜ್ ಸಿಂಗ್, ನಕಲಿ ಹೆಂಡತಿ ಹುಲಿಗೆಮ್ಮ ಬಂಧಿತರು ಎಂದು ಗುರುತಿಸಲಾಗಿದೆ.
ಈ ವಂಚಕರ ಗ್ಯಾಂಗ್ ಗಂಗಾಧರ್ ಹೆಸರಲ್ಲಿ 5.20 ಕೋಟಿ ರೂ. ಇನ್ಶೂರೆನ್ಸ್ ಮಾಡಿಸಿ ಆ ಹಣವನ್ನು ಪಡೆಯುವುದಕ್ಕಾಗಿ ಕೊಲೆ ಮಾಡಿ ಬಳಿಕ ಹೊಸಪೇಟೆ ಹೊರವಲಯದ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಗೆ ಮೃತದೇಹವನ್ನು ತಂದು ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್ ಬಾಡಿಗೆಗೆ ತಂದು ಅದರ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿದ್ದರು. ಈ ಮೂಲಕ ಅಪಘಾತವೆಂದು ಬಿಂಬಿಸಿ ಪರಾರಿಯಾಗಿದ್ದರು.
ಆದರೆ ಅನುಮಾನಗೊಂಡ ಗಂಗಾಧರ ಅವರ ಪತ್ನಿ ಹೊಸಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪಘಾತವಾದರೆ ಬೈಕ್ ಕೀ ಗಾಡಿಯಲ್ಲಿರಬೇಕು ಅಥವಾ ಕೆಳಗೆ ಬಿದ್ದಿರಬೇಕು. ಆದರೆ ಬೀಗ ಸೈಡ್ ಬ್ಯಾಗ್‌ನಲ್ಲಿ ಇದ್ದಿದ್ದೇ ಅನುಮಾನಕ್ಕೆ ಕಾರಣವೆಂದು ಗಂಗಾಧರ್ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು, ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ.