ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಪಂಧಾನ ಪ್ರದೇಶದಲ್ಲಿ ದುರ್ಗಾ ಪೂಜೆಯ ಬಳಿಕ ಮೂರ್ತಿಯನ್ನು ವಿಸರ್ಜಿಸಲು ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ‍್ಯಾಕ್ಟರ್ ಟ್ರಾಲಿ ಉರುಳಿ ಕೊಳಕ್ಕೆ ಬಿದ್ದು ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ.
ಮೃತರಲ್ಲಿ ಹೆಚ್ಚಿನವರು ಯುವತಿಯರು. ಅರ್ದ್ಲಾ ಮತ್ತು ಜಮ್ಲಿ ಗ್ರಾಮಗಳಿಂದ 20-25 ದುರ್ಗಾ ಭಕ್ತರು ದೇವಿಯ ಮೂರ್ತಿಯನ್ನು ವಿಸರ್ಜನೆಗಾಗಿ ಕೊಂಡೊಯ್ಯುತ್ತಿದ್ದರು. ಕೊಳದ ಹತ್ತಿರ ನಿಲ್ಲಿಸಿದ್ದ ಟ್ರ‍್ಯಾಕ್ಟರ್ ಸಮತೋಲನ ತಪ್ಪಿ ನೀರಿಗೆ ಬಿದ್ದ ಪರಿಣಾಮವಾಗಿ ಈ ಅವಘಡ ನಡೆದಿದೆ. .
ಸ್ಥಳೀಯ ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಹಲವರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಕೆಲವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ರಾಲಿಯಲ್ಲಿ ಜನಸಂಖ್ಯೆ ಹೆಚ್ಚಾದ ಕಾರಣ ಸಮತೋಲನ ತಪ್ಪಿ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.