Menu

ರಾಜ್ಯದಲ್ಲಿ ಅ.15ರವರೆಗೂ ಸುರಿಯಲಿದೆ ಮಳೆ

ಕರ್ನಾಟಕದಲ್ಲಿ ವಾಡಿಕೆಯಂತೆ ಸೆಪ್ಟೆಂಬರ್ 30ರೊಳಗೆ ಅಂತ್ಯಗೊಳ್ಳಬೇಕಿದ್ದ ನೈರುತ್ಯ ಮುಂಗಾರು ಈ ವರ್ಷ ಅಕ್ಟೋಬರ್ 15ರವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

ಈ ವರ್ಷ ಮುಂಗಾರು ಮಾರುತ ರಾಜ್ಯದಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಸಿದೆ. ವಾಡಿಕೆಯಂತೆ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ನೈರುತ್ಯ ಮಾನ್ಸೂನ್ ರಾಜ್ಯದಲ್ಲಿ ಮಳೆ ಸುರಿಸುತ್ತದೆ. ಈ ವರ್ಷ ಗಾಳಿಯ ದಿಕ್ಕು ಬದಲಾಗಿ ನೈರುತ್ಯ ಮುಂಗಾರು ಅಕ್ಟೋಬರ್ ಮಧ್ಯಭಾಗದವರೆಗೆ ಮುಂದುವರಿಯಲಿದೆ. ಬಳಿಕ ಈಶಾನ್ಯ ಮಾರುತಗಳಿಂದ ರಾಜ್ಯದಲ್ಲಿ ಮಳೆಯಾಗಲಿದೆ. ಈಶಾನ್ಯ ಮಾನ್ಸೂನ್ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮಳೆ ಸುರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ವರ್ಷ ರಾಜ್ಯದಲ್ಲಿ ಮುಂಗಾರು ಅವಧಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 29ರವರೆಗೆ ಸರಾಸರಿ 845 ಮಿ.ಮೀ. ಮಳೆಯಾಗಬೇಕಿತ್ತು, ಆದರೆ 879 ಮಿ.ಮೀ. ಮಳೆ ದಾಖಲಾಗಿದೆ. ವಾರ್ಷಿಕ ಸರಾಸರಿ ಮಳೆ 964 ಮಿಲಿಮೀಟರ್‌ ಇದ್ದರೂ ಈ ವರ್ಷ 1166 ಮಿಲಿಮೀಟರ್‌ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂದಿನ ಒಂದು ವಾರದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗಿನಲ್ಲಿ ಉತ್ತಮ ಮಳೆ ಸುರಿಯಲಿದೆ. . ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಕಲಬುರಗಿ ಮುಂತಾದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದ ಆತಂಕ ಎದುರಾಗಬಹುದು, ಸ್ಥಳೀಯ ಆಡಳಿತವು ಎಚ್ಚರ ವಹಿಸಬೇಕು ಎಂದು ಇಲಾಖೆ ಸಲಹೆ ನೀಡಿದೆ.

Related Posts

Leave a Reply

Your email address will not be published. Required fields are marked *