Menu

ಬಿಜೆಪಿಯ ಆತ್ಮವಂಚನೆಯ ಪ್ರತಿಭಟನೆ ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ ನಡೆಸುವುದು ಹಾಸ್ಯಸ್ಪದವಾಗಿದೆ. ಬಿಜೆಪಿಯ ಈ ಆತ್ಮವಂಚನೆಯ ಪ್ರತಿಭಟನೆಗಳು ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.

ತಮ್ಮ ” ಎಕ್ಸ್ ” ಖಾತೆಯಲ್ಲಿ ಈ ಬಗ್ಗೆ ಅಂಕಿ ಅಂಶಗಳ ಸಮೇತ ಸುದೀರ್ಘವಾಗಿ ಬರೆದುಕೊಂಡಿರುವ ಅವರು ಬಿಜೆಪಿ ಆಡಳಿತವಧಿಯಲ್ಲಿ ಕಲಬುರಗಿ ಜಿಲ್ಲೆಗೆ ಒಂದು ಮಂತ್ರಿ ಸ್ಥಾನವನ್ನು ಕೊಟ್ಟಿರಲಿಲ್ಲ, ಆಗ ಇದ್ದಂತಹ ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಕಡೆ ತಲೆ ಹಾಕುತ್ತಿರಲಿಲ್ಲ, ಇಂತಹ ಬಿಜೆಪಿಗೆ ಇಂದು ನಮ್ಮ ಕಡೆ ಬೆರಳು ತೋರಿಸುವುದಕ್ಕೆ ಕನಿಷ್ಠ ಮಟ್ಟದ ನೈತಿಕತೆ ಇಲ್ಲ ಎಂದು ಟೀಕಿಸಿದ್ದಾರೆ.

ಕಲಬುರಗಿಯ ಜನರ ಸಂಕಷ್ಟಕ್ಕೆ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿತ್ತು ಎಂಬುದರ ಬಗ್ಗೆ ಅಂಕಿ ಅಂಶಗಳೇ ಮಾತನಾಡುತ್ತವೆ. ಜಿಲ್ಲೆಯ ರೈತರಿಗೆ ಯಾವ ಸರ್ಕಾರ ಎಷ್ಟು ಅನುಕೂಲ ಮಾಡಿಕೊಟ್ಟಿದೆ ಎನ್ನುವುದನ್ನು ನಾವು ಹೇಳುವುದು ಬೇಕಿಲ್ಲ, ಅಂಕಿ ಅಂಶಗಳೇ ಹೇಳುತ್ತವೆ. ಬಿಜೆಪಿ ಸರ್ಕಾರದ ಅವಧಿಯ ನಾಲ್ಕು ವರ್ಷಗಳಲ್ಲಿ ನೆರೆ, ಬರದ ವಿಷಯದಲ್ಲಿ ಬಿಜೆಪಿ ಪರಿಹಾರ ಒದಗಿಸಿಕೊಟ್ಟಿದ್ದು ನಗಣ್ಯ ಎಂದು ಅಂಕಿ-ಅಂಶ ಸಮೇತ ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ ರೈತರಿಗೆ ದೊರಕಿದ ಬೆಳೆ ವಿಮೆ ಪರಿಹಾರ

– 2019 -20ನೇ ಸಾಲಿನಲ್ಲಿ 38,248 ರೈತರಿಗೆ ₹16.65 ಕೋಟಿ,  2020 – 21ನೇ ಸಾಲಿನಲ್ಲಿ 37,145 ರೈತರಿಗೆ ಕೇವಲ ₹22.97 ಕೋಟಿ ,  2021 – 22ನೇ ಸಾಲಿನಲ್ಲಿ 66,234 ರೈತರಿಗೆ ₹57.95 ಕೋಟಿ,  2022 – 23ನೇ ಸಾಲಿನಲ್ಲಿ 1,88,600 ರೈತರಿಗೆ ಒದಗಿಸಿದ್ದು ₹108.6 ಕೋಟಿ ಪರಿಹಾರ .  ನಾಲ್ಕು ವರ್ಷದಲ್ಲಿ ಒಟ್ಟು ₹206.17 ಕೋಟಿ ಪರಿಹಾರ ಮಾತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಅತಿ ಹೆಚ್ಚು ಬೆಳೆ ವಿಮೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದೆ.  2023 – 24ನೇ ಸಾಲಿನಲ್ಲಿ 1,59,622 ರೈತರಿಗೆ ₹189.40 ಕೋಟಿ ,  2024-25 ನೇ ಸಾಲಿನಲ್ಲಿ 2,03,746 ರೈತರಿಗೆ ₹656.63 ಕೋಟಿ,  ಒಟ್ಟು 3,63,368 ರೈತರಿಗೆ ₹846.03 ಕೋಟಿ ಪರಿಹಾರವನ್ನು ಎರಡೇ ವರ್ಷದಲ್ಲಿ ಒದಗಿಸಿದ್ದೇವೆ.  ತೊಗರಿಯ ನೆಟೆ ರೋಗದ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಂಡಿರಲೇ ಇಲ್ಲ, ನಮ್ಮ ಸರ್ಕಾರವು 2023-24ನೇ ಸಾಲಿನಲ್ಲಿ 1,78,354 ರೈತರಿಗೆ ₹181.86 ಕೋಟಿ ನೆಟೆ ರೋಗದ ಪರಿಹಾರ ಒದಗಿಸಿದೆ.

ಹೆಚ್ಚು ಇನ್ ಪುಟ್ ಸಬ್ಸಿಡಿಯನ್ನು ಒದಗಿಸಿಕೊಡುವ ಮೂಲಕ ರೈತರ ನೆರವಿಗೆ ನಿಂತಿದೆ ನಮ್ಮ ಸರ್ಕಾರ, ಎರಡು ವರ್ಷಗಳಲ್ಲಿ 3,49,555 ರೈತರಿಗೆ ₹389.14 ಕೋಟಿ ಸಬ್ಸಿಡಿ ಒದಗಿಸಲಾಗಿದೆ.  ಎರಡೇ ವರ್ಷದ ಅವಧಿಯಲ್ಲಿ ಒಟ್ಟು 8,91,277 ರೈತರು ಫಲಾನುಭವಿಗಳಾಗಿದ್ದಾರೆ, ₹1,417.02 ಕೋಟಿ ಹಣ ರೈತರ ಕೈ ಸೇರಿದೆ. ಬಿಜೆಪಿ ಸರ್ಕಾರ ಕಲಬುರಗಿ ರೈತರಿಗೆ ನಾಲ್ಕು ವರ್ಷಗಳಲ್ಲಿ ಕೊಟ್ಟಿರುವ ಮೊತ್ತದ ಏಳು ಪಟ್ಟು ಹೆಚ್ಚು ಹಣವನ್ನು ನಮ್ಮ ಸರ್ಕಾರ ಎರಡೇ ವರ್ಷದಲ್ಲಿ ಒದಗಿಸಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಈಗಾಗಲೇ ನೆರೆ ಪರಿಸ್ಥಿತಿ ಇದೆ, ಬಿಜೆಪಿಯವರ ನಕಲಿ ಮೊಸಳೆ ಕಣ್ಣೀರಿನಿಂದ ಪ್ರವಾಹ ಹೆಚ್ಚಾಗಬಹುದು, ಹಾಗಾಗಿ ಅವರ ನಕಲಿ ಕಣ್ಣೀರು, ಆತ್ಮವಂಚಕತನದ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.

Related Posts

Leave a Reply

Your email address will not be published. Required fields are marked *