ಸೌಜನ್ಯ ಪರ ಹೋರಾಟಗಾರ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ 1 ವರ್ಷದ ಅವಧಿಗೆ ಗಡಿಪಾರು ಮಾಡಿದ್ದ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು 1 ವರ್ಷ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ತಡೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ತಿಮರೋಡಿಗೆ ಈಗ ತಾತ್ಕಾಲಿಕ ಜಯ ಸಿಕ್ಕಂತಾಗಿದೆ.
ಪುತ್ತೂರಿನ ಎಸಿ ಸ್ಟೆಲ್ಲಾ ವರ್ಗೀಸ್ ಹೊರಡಿಸಿದ್ದ ಗಡಿಪಾರು ಆದೇಶಕ್ಕೆ ಅಕ್ಟೋಬರ್ 8 ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ. ಗಡಿಪಾರು ಆದೇಶ ಪ್ರಕಟವಾದ ಬಳಿಕ ಫೋನ್ ಸ್ವಿಚ್ ಆಫ್ ಮಾಡಿ ತಿಮರೋಡಿ ನಾಪತ್ತೆಯಾಗಿದ್ದರು.
ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದಡಿ ತಿಮರೋಡಿಗೆ 3 ನೋಟಿಸ್ ಜಾರಿಯಾಗಿದೆ. ವಿಚಾರಣೆಗೆ 3 ಬಾರಿಯೂ ಹಾಜರಾಗದ ತಿಮರೋಡಿ ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ.
ಅಶಾಂತಿ ಸೃಷ್ಟಿ ಹಾಗೂ ಸಮಾಜದಲ್ಲಿ ಅಸ್ಥಿರತೆ ಉಂಟುಮಾಡುವ ಚಟುವಟಿಕೆ ಮೇಲೆ ತಿಮರೋಡಿ ವಿರುದ್ಧ 32 ಪ್ರಕರಣಗಳು ದಾಖಲಾಗಿವೆ. ಈಗ ಬುರುಡೆ ಪ್ರಕರಣ ಹಾಗೂ ಶವ ಹೂತಿಟ್ಟ ಪ್ರಕರಣದಲ್ಲಿ ಆರೋಪಿ ಚೆನ್ನಯ್ಯನಿಗೆ ಆಶ್ರಯ ನೀಡಿದ ಆರೋಪವನ್ನು ಎದುರಿಸುತ್ತಿದ್ದಾರೆ.