ಕೆಲವೇ ದಿನಗಳ ಹಿಂದೆ ಔಷಧಗಳ ಆಮದಿನ ಮೇಲೆ ಶೇ.100ರಷ್ಟು ಸುಂಕ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತ ಸೇರಿದಂತೆ ವಿದೇಶಗಳ ಸಿನಿಮಾಗಳ ಮೇಲೆ ಶೇ.100 ಸುಂಕ ವಿಧಿಸುವುದಾಗಿ ಪ್ರಕಟಿಸಿದ್ದಾರೆ.
ಅಮೆರಿಕದ ಚಲನಚಿತ್ರ ವ್ಯವಹಾರವನ್ನು ವಿದೇಶಗಳ ಸ್ಪರ್ಧಿಗಳು ಆಕ್ರಮಿಸಿಕೊಂಡಿದ್ದಾರೆ. ಮಕ್ಕಳಿಂದ ಕ್ಯಾಂಡಿ ಕದಿಯುವ ರೀತಿಯಲ್ಲಿ ಅಮೆರಿಕದ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ಇತರ ದೇಶಗಳು ಕದ್ದಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಅಮೆರಿಕವು ತನ್ನ ದೇಶದ ಹೊರಗೆ ತಯಾರಾಗುವ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ವಿಧಿಸುತ್ತದೆ ಎಂದು ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ನಲ್ಲಿ ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕನ್ ಚಲನಚಿತ್ರೋದ್ಯಮವು ಅತ್ಯಂತ ವೇಗವಾಗಿ ಸಾಯುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಟ್ರಂಪ್, ವಿದೇಶ ಚಲನಚಿತ್ರಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಪ್ರಕ್ರಿಯೆ ಪ್ರಾರಂಭಿಸಲು ವಾಣಿಜ್ಯ ಇಲಾಖೆ ಮತ್ತು ಯುಎಸ್ ವ್ಯವಹಾರ ಪ್ರತಿನಿಧಿಗೆ ಅಧಿಕಾರ ನೀಡಿದ್ದಾರೆ.
ಟ್ರಂಪ್ ಅವರ ಈ ಸುಂಕ ಕ್ರಮದಿಂದ ಹಾಲಿವುಡ್ಗೆ ಮತ್ತಷ್ಟು ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅನೇಕ ಯುಎಸ್ ಸ್ಟುಡಿಯೋಗಳು ವೆಚ್ಚ ಕಡಿತಗೊಳಿಸಲು ವಿದೇಶಗಳಲ್ಲಿ ಚಿತ್ರೀಕರಣ ಮಾಡುತ್ತವೆ. ಈಗ ಸುಂಕದಿಂದ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.
ಔಷಧಗಳಆಮದಿನ ಮೇಲೆ ಶೇ.100ರಷ್ಟು ಅಕ್ಟೋಬರ್ 1ರಿಂದ ಜಾರಿಯಾಗಲಿದೆ. ಅಡುಗೆ ಮನೆಗೆ ಬಳಸುವ ಪಿಠೋಪಕರಣಗಳ ಮೇಲೆ 50% ಹಾಗೂ ಸ್ನಾನಗೃಹ ಪಿಠೋಪಕರಣ ಆಮದುಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್ಗಳ ಮೇಲೆ 25% ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿರುವುದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ, ಹಣದುಬ್ಬರಕ್ಕೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.