ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಗೈರುಹಾಜರಾಗಿ ಕರ್ತವ್ಯಲೋಪ ಎಸಗಿರುವ ಆಧಾರದಲ್ಲಿ ಇದುವರೆಗೂ 11 ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಎಂಟು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಬೆಂಗಳೂರಿನಲ್ಲಿ ಒಬ್ಬ ಶಿಕ್ಷಕಿಯನ್ನು ಅಮಾನತುಗೊಳಿಸಿ ಬೆಂಗಳೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮಾದನಾಯಕನಹಳ್ಳಿ ಮುಖ್ಯ ಶಿಕ್ಷಕಿ ಸೌಭಾಗ್ಯ ಅವರನ್ನು ಕರ್ತವ್ಯ ಲೋಪ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ. ಅಕ್ಟೋಬರ್ 7ಕ್ಕೆ ಅಂತಿಮ ದಿನವಾಗಿರುವ ಕಾರಣ ಅಧಿಕಾರಿಗಳು ಸಮೀಕ್ಷೆಯನ್ನು ಮುಗಿಸುವ ಭರದಲ್ಲಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಯಾವುದೇ ಒಂದು ಜಾತಿ-ಧರ್ಮಗಳಿಗೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಯಾರ ವಿರುದ್ಧವೂ ಅಲ್ಲ, ಇದು ಎಲ್ಲರ ಪರವಾಗಿರುವ ಸಮೀಕ್ಷೆ. ಇದರ ಮುಖ್ಯ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಸಾಧಿಸಿ ಸರ್ವರಿಗೂ ಸಮಪಾಲು, ಸಮಬಾಳು ನೀಡುವುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಪ್ರತಿಯೊಂದು ಜಾತಿ ಮತ್ತು ಧರ್ಮದೊಳಗಿನ ಉಳ್ಳವರ ಕೈಯಲ್ಲಿಯೇ ಇರಬೇಕು ಎನ್ನುವ ಉದ್ದೇಶದಿಂದ ಬಿಜೆಪಿಯವರು ಸಮೀಕ್ಷೆ ವಿರೋಧಿಸುತ್ತಿದ್ದಾರೆ. ಬಿಹಾರದಲ್ಲಿ ಇವರದ್ದೇ ಮೈತ್ರಿ ಸರ್ಕಾರ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ತೆಲಂಗಾಣದಲ್ಲಿಯೂ ನಡೆದಿದೆ. ಅಲ್ಲಿ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ. ಮೋದಿ ಕೇಂದ್ರಸರ್ಕಾರವೇ ಜಾತಿ ಗಣತಿ ಮಾಡಲು ಹೊರಟಿದೆ. ಬಿಜೆಪಿ ನಾಯಕರೇ ನೀವು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ ವಿರೋಧಿಸುತ್ತೀರಾ, ಪ್ರಧಾನಿಯ ಎದುರು ತಲೆ ಎತ್ತಿ ಮಾತನಾಡುವ ದಮ್ಮು-ತಾಕತ್ತು ಇಲ್ಲದ ನಿಮಗೆ ವಿರೋಧಿಸುವ ಧೈರ್ಯ ಇದೆಯೇ ಎಂದು ಸಿಎಂ ಕಿಡಿ ಕಾರಿದ್ದಾರೆ.