ರಾಜ್ಯದಲ್ಲಿ ಒಂದೆಡೆ ಮಳೆಯ ಅವಾಂತರವಾದರೆ ಮತ್ತೊಂದೆಡೆ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿದ್ದು, ಐದಕ್ಕಿಂತ ಹೆಚ್ಚು ಸಾವುಗಳಾಗಿವೆ. ಸತತ ಮಳೆಯಿಂದಾಗಿ ಡೆಂಗ್ಯು ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಕಳೆದ ಒಂಭತ್ತು ತಿಂಗಳಲ್ಲಿ 5093 ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರಿನಲ್ಲಿ 2478 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಹೊರತುಪಡಿಸಿ ರಾಜ್ಯಾದಾದ್ಯಂತ 2615 ಪ್ರಕರಣಗಳು ದೃಢಪಟ್ಟಿವೆ. ನಿಂತ ನೀರಲ್ಲಿ ಬೆಳೆಯುವ ಸೊಳ್ಳೆಯಿಂದ ಡೆಂಗ್ಯು ಹರಡುತ್ತದೆ.
ಆರಂಭದಲ್ಲಿ ವಿಪರೀತ ಜ್ವರ, ತಲೆನೋವು, ಮೈಕೈ ನೋವು, ಕೀಲುನೋವು, ವಾಂತಿ- ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳು ಕಾಣಿಸಿಕೊಳ್ಳುತ್ತವೆ. ಮನೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವ ಜೊತೆಗೆ ಆರಂಭದಲ್ಲೇ ಸೂಕ್ತ ತಪಾಸಣೆ ಮತ್ತು ವೈದ್ಯಕೀಯ ಉಪಚಾರ ಪಡೆದುಕೊಳ್ಳುವ ಮೂಲಕ ಅಪಾಯದಿಂದ ಪಾರಾಗಬಹುದು.