ನಗೆ ನಾಟಕಗಳ ಬಾದ್‌ಶಾ ಎಂದು ಹೆಸರಾಗಿರುವ ರಂಗಕರ್ಮಿ ನಟ, ನಿರ್ದೇಶಕ, ನಾಟಕಕಾರ ಯಶವಂತ ಸರದೇಶಪಾಂಡೆ (೬೦) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಇತ್ತೀಚೆಗಷ್ಟೇ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್‌ನಲ್ಲಿ ‘ಉತ್ತರೋತ್ತಮ ಉತ್ಸವ – 2025’ ನಡೆಯಿತು. ಯಶವಂತ್ ಸರ್‌ದೇಶಪಾಂಡೆ ಅವರ 60ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಉತ್ಸವ ಇದಾಗಿತ್ತು.
ಯಶವಂತ ಸರದೇಶಪಾಂಡೆಯವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿ ಎಂಬ ಹಳ್ಳಿಯಲ್ಲಿ ೧೩.೦೬.೧೯೬೫ರಲ್ಲಿ ಜನಿಸಿದ್ದರು. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ.
ಇವರ ಪತ್ನಿ ಮಾಲತಿ ಸರದೇಶಪಾಂಡೆ ಧಾರವಾಡದವರಾಗಿದ್ದು, ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಹಿಂದೂಸ್ತಾನಿ ಸಂಗೀತ ಕಲಿತಿದ್ದು, ನಟನೆಯಲ್ಲಿಯೂ ಛಾಪು ಮೂಡಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ 2010, ಸನ್‌ಫೀಸ್ಟ್-ಉದಯ ಪ್ರಶಸ್ತಿ 2006, 2003 ರಲ್ಲಿ ಆರ್ಯಭಟ ಪ್ರಶಸ್ತಿ, 2005ರಲ್ಲಿ ಮಯೂರ್ ಪ್ರಶಸ್ತಿ, 2008 ರಲ್ಲಿ ಅಭಿನಯ ಭಾರತಿ ಪ್ರಶಸ್ತಿ, 2008 ರಲ್ಲಿ ರಂಗಧ್ರುವ ಪ್ರಶಸ್ತಿ , 2008ರಲ್ಲಿ ಗ್ಲೋಬಲ್‌ಮ್ಯಾನ್ ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಕನ್ನಡ , ಹಿಂದಿ, ಮರಾಠಿಯ ಕೆಲವು ಚಿತ್ರಗಳಲ್ಲೂ ಯಶವಂತ ಸರದೇಶಪಾಂಡೆ ಕೆಲಸ ಮಾಡಿದ್ದರು. ಅವರ ಬಹುತೇಕ ನಾಟಕಗಳು 500 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ.
ಹೆಗ್ಗೋಡಿನ ನೀನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪಡೆದಿದ್ದು, ನ್ಯೂಯಾರ್ಕ್ ವಿಶ್ವವಿದ್ಯಾಯದಿಂದ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದಿದ್ದರು.