ಬಾಗಲಕೋಟೆ ಜಿಲ್ಲೆಯ ಬೀಳಗಿ ಅನಗವಾಡಿ ಬ್ರಿಡ್ಜ್ ಬಳಿ ಕಾರು ಮತ್ತು ಟಂಟಂ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಊಟಕ್ಕೆಂದು ಸಮೀಪದ ವಿಜಯಪುರದ ಕೊಲ್ಹಾರಕ್ಕೆ ತೆರಳಿದ್ದ ಐವರಿದ್ದ ಟಂಟಂ ವಾಹನ ತಡರಾತ್ರಿ ಬಾಗಲಕೋಟೆ ಕಡೆಗೆ ವಾಪಸ್ ಹೊರಟಿದ್ದಾಗ ಅಪಘಾತ ನಡೆದಿದೆ. ಮೃತರು ಮತ್ತು ಗಾಯಾಳುಗಳು ನವನಗರದ 45 ನೇ ಸೆಕ್ಟರ್ ನಿವಾಸಿಗಳು.
ಕಾರು ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮುಂದೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಟಂ ಟಂ ಗೆ ಡಿಕ್ಕಿ ಹೊಡೆದಿದೆ.
ಪತಿಯ ವಿಕೃತ ಕಾಮದಾಹ: ಕೊಲೆಗೈದ ಪತ್ನಿ
ಕೊಪ್ಪಳ ತಾಲೂಕಿನ ಮುನಿರಾಬಾದ್ನ ಪಂಪಾವನ ಮುಂಭಾಗದ ಸರ್ಕಾರಿ ಕ್ವಾಟರ್ಸ್ನಲ್ಲಿ ಗಂಡನನ್ನೇ ಹೆಂಡತಿ ಕೊಲೆ ಮಾಡಿದ್ದಾಳೆ. 51 ವರ್ಷದ ಕೆಪಿಸಿಎಲ್ ನೌಕರ ರಮೇಶ್ ಕೊಲೆಯಾಗಿದ್ದು, ಮಾಹದೇವಿ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ಇವರಿಬ್ಬರು ಮದುವೆಯಾಗಿ 25 ವರ್ಷವಾಗಿದೆ. ಮಗ ದುಬೈನಲ್ಲಿದ್ದರೆ ಮಗಳು ಓದುತ್ತಿದ್ದಾರೆ. ಮದುವೆಯಾಗಿ 25 ವರ್ಷ ಕಳೆದರೂ ಹೆಂಡತಿಗೆ ಕಿರುಕುಳ ಕೊಡುವುದನ್ನು ರಮೇಶ್ ಬಿಟ್ಟಿರಲಿಲ್ಲ. ಎರಡ್ಮೂರು ದಿನಗಳ ಹಿಂದೆ ಹೀಗೆ ಜಗಳ ನಡೆದು ವಿಕೋಪಕ್ಕೆ ಹೋದಾಗ ಮಹಾದೇವಿ ಒನಕೆಯಿಂದ ಹೊಡೆದಿದ್ದು, ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ಧಾರೆ.
ಹಣಕಾಸಿನ ವಿಚಾರಕ್ಕೂ ಮನೆಯಲ್ಲಿ ಗಲಾಟೆಯಾಗುತ್ತಿತ್ತು. ಮಗನ ವಿವಾಹ ವಿಚ್ಛೇದನ ವಿಚಾರವಾಗಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ರಮೇಶನ ಕಾಮದಾಹ ಹೆಂಡತಿ ಮಹಾದೇವಿಗೆ ಸಾಕಾಗಿ ಹೋಗಿತ್ತು. ವಯಸ್ಸು 50 ದಾಟಿದರೂ ನಿತ್ಯ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದು, ಅಶ್ಲೀಲ ವೀಡಿಯೊ ತೋರಿಸಿ ಹೀಗೆ ಸಹಕರಿಸು ಎಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ರಮೇಶ್ ಮೃತ ದೇಹ ಅರ್ಧಂಬರ್ಧ ಬಟ್ಟೆಯಲ್ಲಿತ್ತು, ಅಶ್ಲೀಲ ವೀಡಿಯೊ ತೋರಿಸಿ ಅದೇ ರೀತಿ ಸಹಕರಿಸು ಎಂದು ಹೇಳಿರುವುದನ್ನು ಸಹಿಸದೆ ಮಹಾದೇವಿ ಒನಕೆಯಿಂದ ಹೊಡೆದಿದ್ದು, ಕೊಲೆ ಮಾಡಬೇಕು ಎಂಬ ಉದ್ದೇಶದಿಂದ ಹೊಡೆದಿಲ್ಲ ಎಂದು ಪೊಲೀಸರ ಮುಂದೆ ಹೇಳಿದ್ದಾರೆ.