Menu

ತುಮಕೂರಿಗೆ ಮೆಟ್ರೋ ರೈಲು ನೀಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ: ಡಿಕೆ ಶಿವಕುಮಾರ್‌

ತುಮಕೂರಿಗೆ ಹೆಚ್ಚಿನ ಶಕ್ತಿ ತುಂಬಲು, ಸ್ಯಾಟಲೈಟ್ ಟೌನ್ ಜತೆಗೆ, ಅಂತರನಗರ ರೈಲು ಹಾಗೂ ಮೆಟ್ರೋ ರೈಲು ನೀಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೊಡ್ಡ ಪರಂಪರೆ ಇದೆ. ಬೆಂಗಳೂರಿನಂತೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅನೇಕ ಯೋಜನೆ ರೂಪಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಸಚಿವ ಕೆ.ಎನ್. ರಾಜಣ್ಣ ಅವರ 75ನೇ ಜನ್ಮದಿನ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು.

ಇದು ಐತಿಹಾಸಿಕ ಜನ್ಮದಿನ ಕಾರ್ಯಕ್ರಮ. ನೇರ ನುಡಿ ಸ್ವಾಭಿಮಾನದ ನಾಯಕ ರೈತಾಪಿ ಜನರ ಬದುಕು ಸುಧಾರಣೆಯ ಗುರಿ ಹೊಂದಿರುವ, ಆತ್ಮೀಯ ಸ್ನೇಹಿತನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ರಾಜಣ್ಣ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಜನರ ಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ರೈತನಿಗೆ ಲಂಚ, ಬಡ್ತಿ, ನಿವೃತ್ತಿ, ಪಿಂಚಣಿ ಇಲ್ಲ. ರೈತರ ಹಿತಕ್ಕಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ನೀಡಿತ್ತಿದ್ದೇವೆ. ರಾಜಣ್ಣ ಅವರು ಬಹಳ ಆಸಕ್ತಿಯಿಂದ ಈ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದಾರೆ. ನಾನು ಕೂಡ ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ಸಹಕಾರ ಸಚಿವನಾಗಿದ್ದಾಗ, ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಹಾಗೂ ಷಡಕ್ಷರಿ ಅವರನ್ನು ಎಸ್ ಎಲ್ ಡಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು ಎಂದು ಸ್ಮರಿಸಿದರು.

ತುಳಿತಕ್ಕೆ ಒಳಗಾದ ಸಮಾಜದ ಧೀಮಂತ ನಾಯಕನಿಗೆ ಶುಭ ಹಾರೈಸಲು ನಾವು ಇಲ್ಲಿ ಸೇರಿದ್ದೇವೆ. ನಾನು ಹಾಗೂ ರಾಜಣ್ಣ ಅವರು ಸಿಯೋಲ್, ಜಪಾನ್ ಹಾಗೂ ದಕ್ಷಿಣ ಕೊರಿಯಾ ಇತರೆ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಹಕಾರ ಸಹಭಾಗಿತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಆಮೂಲಕ ಸಹಕಾರ ಕ್ಷೇತ್ರದ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ್ದೆವು. ಈಗ ನಾವು ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅವರು ತಮ್ಮ ಕೆಲಸವನ್ನು ಹೀಗೆ ಮುಂದುವರಿಸಿಕೊಂಡು ಹೋಗಲಿ. ದೇವರು ಅವರಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ಶುಭ ಕೋರಿದರು.

ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ನಾವು ಯಾವುದೇ ಜಾತಿ, ಧರ್ಮದಲ್ಲಿ ಹುಟ್ಟಿದ್ದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು. ಮೇಲ್ಜಾತಿ, ಕೆಳ ಜಾತಿ ಎಂಬ ತಾರತಮ್ಯ ಬೇಡ. ಎಲ್ಲ ವರ್ಗಕ್ಕೆ ನಾವು ಶಕ್ತಿಯಾಗಿ ನಿಲ್ಲಬೇಕು. ಇದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಅದರಂತೆ ರಾಜಣ್ಣ ಅವರ ಕುಟುಂಬ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ರೈತರ ಬದುಕು ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಕೊಟ್ಟ ಮಾತಿನಂತೆ ನಡೆದು ಜನರ ಆಶೋತ್ತರ ಈಡೇರಿಸಿದ್ದೇವೆ. 2027ರ ಒಳಗಾಗಿ ಎತ್ತಿನ ಹೊಳೆ ನೀರನ್ನು ತುಮಕೂರು ಮಾರ್ಗವಾಗಿ ಹರಿಸಲು ತೀರ್ಮಾನಿಸಿದ್ದೇವೆ. ಕುಡಿಯುವ ನೀರು ಪೂರೈಸಿದ ನಂತರ ಕೆರೆ ತುಂಬಿಸಲಾಗುವುದು ಎಂದು ಭರವಸೆ ನೀಡಿದರು.

ನೀವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ, ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಿ, ನಿಮ್ಮೆಲ್ಲರ ಸೇವೆ ಮುಂದುವರಿಸಲು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ನಾವು ನಿಮಗೆ ನುಡಿದಂತೆ ನಡೆದಿದ್ದು, ನಮಗೆ ನಿಮ್ಮ ಆಶೀರ್ವಾದ ಬೇಕು. ನೀವು ಎಲ್ಲಿಯವರೆಗೂ ಆಶೀರ್ವಾದ ಮಾಡುತ್ತೀರೋ ಅಲ್ಲಿಯವರೆಗೆ ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ. ನಾವು ಪರಮೇಶ್ವರ್ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ರಚಿಸಿದ್ದೆವು. ನಮ್ಮ ಸರ್ಕಾರ 2 ವರ್ಷದಲ್ಲೇ 70% ಪ್ರಣಾಳಿಕೆಯಲ್ಲಿರುವ ಭರವಸೆ ಪೂರ್ಣಗೊಳಿಸಿದ್ದೇವೆ. ನಮ್ಮ ಈ ಹಿಂದಿನ ಸರ್ಕಾರದಲ್ಲಿ 165 ಭರವಸೆಗಳ ಪೈಕಿ 145ಕ್ಕೂ ಹೆಚ್ಚಿನ ಭರವಸೆ ಈಡೇರಿಸಿದ್ದೆವು ಎಂದು ಹೇಳಿದರು.

ನಮ್ಮ ಗ್ಯಾರಂಟಿ ಹಾಗೂ ಎಲ್ಲಾ ಇಲಾಖೆಗಳಲ್ಲಿನ ಅಭಿವೃದ್ಧಿ ಯೋಜನೆ ದೇಶಕ್ಕೆ ಮಾದರಿಯಾಗಿದೆ. 4 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡಿಸಿ ಎಲ್ಲಾ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ವಿಜಯನಗರದಲ್ಲಿ 1,11,111 ಮಂದಿ ತಾಂಡಾ, ಬುಡಕಟ್ಟು ಜನರಿಗೆ, ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಮೂಲಕ ಭೂಮಿ ದಾಖಲೆ ಉಚಿತವಾಗಿ ಹಂಚಿದ್ದೇವೆ ಎಂದರು.

Related Posts

Leave a Reply

Your email address will not be published. Required fields are marked *