ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಗಷ್ಟೇ ಋತುಮತಿಯಾದ ಬಾಲಕಿಯರನ್ನು ತೋರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದ ಶೋಭಾ ಹಾಗೂ ತುಳಸಿಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ವಾಟ್ಸಾಪ್ ಮೂಲಕ ಬಾಲಕಿಯರ ವೀಡಿಯೊವನ್ನು ಗ್ರಾಹಕರಿಗೆ ತೋರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಕ ಬಾಲಕಿ ಜೊತೆ ಮೊದಲ ಲೈಂಗಿಕ ಸಂಪರ್ಕಕ್ಕೆ 20 ಲಕ್ಷ ರೂಪಾಯಿ ನಿಗದಿ ಮಾಡಿದ್ದರು ಎಂದು ಒಡನಾಡಿ ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಚಿನ್ನದ ಗಟ್ಟಿ ತೆಗೆದುಕೊಂಡು ಹೋಗುತ್ತಿದ್ದವನ ಅಪಹರಣ
ಮಂಗಳೂರಿನ ಕಾರ್ ಸ್ಟ್ರೀಟ್ ಜನಜಂಗುಳಿ ಇರುವ ಪ್ರದೇಶವಾಗಿದ್ದು, ವ್ಯಕ್ತಿಯೊಬ್ಬನನ್ನು ರಾತ್ರಿ ಅಪಹರಣ ಮಾಡಿರುವ ಘಟನೆ ನಡೆದಿದೆ. ಸೆಪ್ಟೆಂಬರ್ 26ರ ರಾತ್ರಿ 8.30ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ.
ಬೈಕ್ ನಲ್ಲಿ ಕೋಟಿ ಮೌಲ್ಯದ ಚಿನ್ನದ ಗಟ್ಟಿ ತಗೆದುಕೊಂಡು ಹೋಗುತ್ತಿದ್ದ ಮುಸ್ತಫಾ ಎಂಬಾತನನ್ನು ಬೈಕ್‌ನಲ್ಲಿ ಬಂದ ಅಪರಿಚಿತರು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿ ಬಂದವರು ಮುಸ್ತಫಾನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ. ಚಿನ್ನದ ಗಟ್ಟಿ ಕಸಿಯಲು ಕಿಡ್ನಾಪ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಬೆಂಗಳೂರಲ್ಲಿ ಹಣ ದೋಚಿದ್ದ ಗ್ಯಾಂಗ್ ಅರೆಸ್ಟ್ : ಬೆಂಗಳೂರಿನಲ್ಲಿ ಒಂದು ಕೋಟಿ ಒಂದು ಲಕ್ಷ ರೂ ದೋಚಿದ್ದ ಗ್ಯಾಂಗ್ ಅನ್ನು ಕೃತ್ಯ ನಡೆದ ಕೆಲವೇ ಕ್ಷಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಕೆಲವೇ ಕ್ಷಣದಲ್ಲಿ ಬೆಂಗಳೂರಿನ ಹುಳಿಮಾವು ಪೊಲೀಸರು ದರೋಡೆಕೋರರನ್ನು ಹಿಡಿದು ಹಣ ವಶಕ್ಕೆ ಪಡೆದಿದ್ದಾರೆ. ಹೇಮಂತ್ ಎಂಬಾತ ಅಡಿಕೆ ಮಂಡಿಗೆ ನೀಡಬೇಕಿದ್ದ ಒಂದು ಕೋಟಿ ಒಂದು ಲಕ್ಷ ನಗದು ಪಡೆಯಲು ಹುಳಿಮಾವು ಬಳಿ ಅಕ್ಷಯ ನಗರಕ್ಕೆ ಬಂದಿದ್ದಾಗ ನರಸಿಂಹ ಮತ್ತು ಜೀವನ್ ಗ್ಯಾಂಗ್ ಅಡ್ಡಗಟ್ಟಿ ಬೆದರಿಸಿ ಹಲ್ಲೆ ಮಾಡಿ ಹಣ ದೋಚಿಕೊಂಡು ಪರಾರಿಯಾಗಿತ್ತು. ಮಾಹಿತಿ ಪಡೆದ ಹುಳಿಮಾವು ಇನ್ಸ್ ಪೆಕ್ಟರ್ ಕುಮಾರಸ್ವಾಮಿ ತಂಡ ಕಾರ್ಯಚರಣೆ ನಡೆಸಿ ಅರ್ಧ ಗಂಟೆಯಲ್ಲೇ ಗ್ಯಾಂಗ್ ಅನ್ನು ಬಂಧಿಸಿದೆ.