ಧಾರಾಕಾರ ಸುರಿದ ಮಳೆಗೆ ಸಕಲೇಶಪುರದ ಎಡಕುಮೇರು ಬಳಿ ರೈಲು ಹಳಿ ಮೇಲೆ ಗುಡ್ಡ ಕುಸಿದಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಬಂಡೆ ಬಿದ್ದಿರುವ ಸ್ಥಳದಿಂದ ಸ್ವಲ್ಪ ದೂರ ನಿಲುಗಡೆಯಾಗಿದೆ. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.
ರೈಲು ಸ್ಥಗಿತಗೊಂಡಿದ್ದರಿಂದ ನೂರಾರು ಪ್ರಯಾಣಿಕರು ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದು, ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಬೇರೆ ವಾಹನದಲ್ಲಿ ತೆರಳುತ್ತಿದ್ದಾರೆ .ರೈಲ್ವೆ ಹಳಿ ಮೇಲೆ ಬಿದ್ದಿರುವ ಮಣ್ಣನ್ನು ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ.
ಎಡಕುಮೇರು ಬಳಿ ಅರೆಬೆಟ್ಟ ಮತ್ತು ಎಡಕುಮೇರು ಮಧ್ಯೆ ಭಾಗದಲ್ಲಿ ರೈಲು ಹಳಿ ಮೇಲೆ ಭೂಕುಸಿತವಾಗಿದೆ. ಭಾರೀ ಗಾತ್ರದ ಬಂಡೆ ಉರುಳಿದ್ದು, ಹಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ಸ್ಥಗಿತ ಗೊಳಿಸಲಾಗಿದೆ.