ಕಳೆದ ಮೂರು ದಿನಗಳಿಂದ ಬೆನ್ನುಟ್ಟುತ್ತಿರುವ ಮಳೆರಾಯನ ಆರ್ಭಟಕ್ಕೆ ಉತ್ತರ ಕರ್ನಾಟಕ ಜನ ಕಂಗಾಲಾಗಿದ್ದಾರೆ. ಕಲಬುರಗಿ, ಯಾದಗಿರಿ, ಬೀದರ್, ವಿಜಯಪುರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಪ್ರವಾಹ ಹಾಗೂ ಮಳೆಯಿಂದಾಗಿ ಜಾನುವಾರುಗಳ ನಷ್ಟವೂ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಮಳೆ ಸಂಬಂಧಿತ ದುರ್ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದು, ಮತ್ತೋರ್ವ ಬಾಲಕ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿರಂತರ ಮಳೆಯ ಜೊತೆಗೆ ಉಕ್ಕಿ ಹರಿಯುತ್ತಿರುವ ಭೀಮಾ ನದಿಯು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅಣೆಕಟ್ಟುಗಳಿಂದ ನೀರು ಬಿಡುವುದರಿಂದ ಲಕ್ಷಾಂತರ ಎಕರೆ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿದ್ದು, ಪಟ್ಟಣ ಪ್ರದೇಶಗಳಲ್ಲಿ ನೀರು ನುಗ್ಗಿ ರಸ್ತೆ, ಮನೆ ಹಾಗೂ ಮೂಲಸೌಕರ್ಯಗಳಿಗೆ ಗಣನೀಯ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಜಾರಿಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅಫಜಲ್‌ಪುರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಅವರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನದಿ ಪಾತ್ರದ ಕೆಲವೆಡೆ ಜನರು ಪುನರ್ವಸತಿ ಬೇಡಿಕೆ ಇಟ್ಟಿದ್ದು, ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ವಿವರ ಒದಗಿಸಿದರೆ ಅದನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 2024–25 ಸಾಲಿನ ಎರಡನೇ ಕಂತಿನ ಬೆಳೆ ವಿಮೆ ಪರಿಹಾರವಾಗಿ ರೂ.315.64 ಕೋಟಿ ಬಿಡುಗಡೆಗೊಂಡಿದ್ದು, ಶೀಘ್ರದಲ್ಲೇ ರೈತರ ಖಾತೆಗೆ ಜಮೆಯಾಗಲಿದೆ ಎಂದು ತಿಳಿಸಿದರು.
ಬೆಳೆ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರಕ್ಕಿಂತ ಹೆಚ್ಚಿನ ನೆರವು ಒದಗಿಸಿದೆ ಎಂದು ಸಚಿವರು ಹೇಳಿದರು. ಬರ ಮತ್ತು ನೆರೆ ಪರಿಹಾರವಾಗಿ ರೂ.389.14 ಕೋಟಿ ನೀಡಲಾಗಿದೆ, ಆದರೆ ಬಿಜೆಪಿ ಆಡಳಿತದಲ್ಲಿ ಕೇವಲ ರೂ.206 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿತ್ತು ಎಂದು ಖರ್ಗೆ ಟೀಕಿಸಿದರು.
ಬಿಜೆಪಿ ನಾಯಕರು ರಾಜಕೀಯ ಮಾಡಬಾರದು, ಬದಲಿಗೆ ಎನ್‌ಡಿಆರ್‌ಎಫ್ ನಿಯಮ ಸರಳೀಕರಣಕ್ಕಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲಿ ಎಂದು ಹೇಳಿದರು.
ಕಲಬುರಗಿಗೆ ಆರೆಂಜ್ ಅಲರ್ಟ್
- ಹವಾಮಾನ ಇಲಾಖೆಯು ಮುಂದಿನ 48 ಗಂಟೆಗಳ ಕಾಲ ಕಲಬುರಗಿ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಿದೆ.
- ಕಲಬುರಗಿ ಜಿಲ್ಲೆಯಲ್ಲಿ ಜನವರಿ 2025 ರಿಂದ ಸೆಪ್ಟೆಂಬರ್ 25ರವರೆಗೆ 614 ಮಿಮೀ ವಾಡಿಕೆ ಮಳೆಯ ಬದಲು 901 ಮಿಮೀ ಮಳೆ ಸುರಿದು, ಶೇ.47 ಹೆಚ್ಚುವರಿ ಮಳೆಯಾಗಿದೆ.
- ಆಗಸ್ಟ್ ತಿಂಗಳ ವಾಡಿಕೆ ಮಳೆ 156 ಮಿಮೀ, ಆದರೆ 263 ಮಿಮೀ ಮಳೆ ಸುರಿದು ಶೇ.69 ಹೆಚ್ಚುವರಿ ದಾಖಲಾಗಿದೆ.
- ಸೆಪ್ಟೆಂಬರ್ 1ರಿಂದ 25ರವರೆಗೆ 145 ಮಿಮೀ ಮಳೆ ನಿರೀಕ್ಷೆಯಾಗಿದ್ದರೆ, ವಾಸ್ತವವಾಗಿ 202 ಮಿಮೀ ಮಳೆ ಸುರಿದು ಶೇ.39 ಹೆಚ್ಚುವರಿ ಆಗಿದೆ.
- ಕಳೆದ ವಾರ 47 ಮಿಮೀ ವಾಡಿಕೆ ಮಳೆಯ ಬದಲು 88 ಮಿಮೀ ಮಳೆಯಾಗಿ ಶೇ.85 ಹೆಚ್ಚುವರಿ ದಾಖಲಾಗಿದೆ.
- ಈ ಮಳೆಯಿಂದಾಗಿ ತೊಗರಿ, ಉದ್ದು, ಹತ್ತಿ, ಹೆಸರು ಸೇರಿದಂತೆ ಪ್ರಮುಖ ಬೆಳೆಗಳು ಹಾನಿಯಾಗಿವೆ.
- 2023–24ರಲ್ಲಿ ಇನ್‌ಪುಟ್ ಸಬ್ಸಿಡಿ ಮತ್ತು ಬೆಳೆ ವಿಮೆ ಸೇರಿ 8,91,277 ರೈತರಿಗೆ ರೂ.1,417 ಕೋಟಿ ಪರಿಹಾರ ನೀಡಲಾಗಿದೆ.
- 2023–24 ಮತ್ತು 2024–25 ಸಾಲಿನಲ್ಲಿ 3,63,368 ರೈತರಿಗೆ ರೂ.846.03 ಕೋಟಿ ಪರಿಹಾರ ನೀಡಲಾಗಿದೆ.
- ಕಲಬುರಗಿ ಜಿಲ್ಲೆಯಲ್ಲಿ ನೆಟೆರೋಗದಿಂದ ತೊಗರಿ ಬೆಳೆ ಹಾನಿಯಾದ ಸಂದರ್ಭದಲ್ಲಿ 1,78,354 ರೈತರಿಗೆ ರೂ.182 ಕೋಟಿ ಪರಿಹಾರ ನೀಡಲಾಗಿದೆ.
- ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ 45,000 ಕ್ಯೂಸೆಕ್ಸ್, ಸಿನಾ ಜಲಾಶಯದಿಂದ 2,70,000 ಕ್ಯೂಸೆಕ್ಸ್, ವಿರಾ ಜಲಾಶಯದಿಂದ 30,000 ಕ್ಯೂಸೆಕ್ಸ್ ಮತ್ತು ಭೋರಿ ಹಳ್ಳದಿಂದ 5,000 ಕ್ಯೂಸೆಕ್ಸ್ ನೀರು ಬಿಡಲಾಗಿದ್ದು, ಒಟ್ಟಾರೆಯಾಗಿ ಭೀಮಾ ನದಿಗೆ 3,50,000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ.
- ಜಿಲ್ಲೆಯಲ್ಲಿ ಒಟ್ಟು 1.05 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂಬ ಅಂದಾಜು ಇದೆ.