ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್ ನೇತೃತ್ವದ ಬೃಹತ್ ರ‍್ಯಾಲಿ ವೇಳೆ ನೂಕುನುಗ್ಗಲು ಉಂಟಾಗಿ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ನಡೆದ ರ‍್ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಜನಸಮೂಹ ನಿಯಂತ್ರಿಸಲಾಗದೆ ಇದ್ದಕ್ಕಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಮೂವರು ಮಕ್ಕಳು ಸೇರಿದಂತೆ ಸುಮಾರು 39 ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಸ್ಥಿತಿ ಚಿಂತಾಜನಕವಾಗಿದ್ದಾರೆ ಎಂದು ವರದಿ ಮಾಡಲಾಗಿದೆ.
ಘಟನೆ ನಡೆದ ಸಮಯದಲ್ಲಿ ವಿಜಯ್ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿ, ಕಾರ್ಯಕರ್ತರಿಗೆ ಜನರ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ಕರೆದೊಯ್ಯಲು ದಾರಿ ಮಾಡಿಕೊಡುವಂತೆ ಸೂಚಿಸಿದರು.
ಈ ಘಟನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ನಾಳೆ ಕರೂರಿಗೆ ತೆರಳಿ ಗಾಯಾಳುಗಳನ್ನು ನೇರವಾಗಿ ಭೇಟಿಯಾಗಲಿದ್ದಾರೆ. ಈ ನಡುವೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇಂದು ವರದಿಯಾಗಿದೆ.
ಗಾಯಗೊಂಡು ಪ್ರಜ್ಞಾಹೀನರಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ತಕ್ಷಣ ಮತ್ತು ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸ್ಟಾಲಿನ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಾಜಿ ಸಚಿವ ವಿ.ಸೆಂಥಿಲ್‌ಬಾಲಾಜಿ, ಆರೋಗ್ಯ ಸಚಿವ ಮಾ. ಸುಬ್ರಮಣಿಯನ್, ಜಿಲ್ಲಾಧಿಕಾರಿಗಳಿಗೆ ತಕ್ಷಣ ಚಿಕಿತ್ಸೆ ವ್ಯವಸ್ಥೆ ಖಚಿತಪಡಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅವರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಸ್ಟಾಲಿನ್, ಸಾರ್ವಜನಿಕರಲ್ಲಿ ಶಾಂತಿ ಕಾಪಾಡಲು ಮತ್ತು ಪರಿಸ್ಥಿತಿಯನ್ನು ತಿಳಿಗೊಳಿಸಲು ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.