‘ಬಿಗ್ ಬಾಸ್ ಸೀಸನ್ 12’ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿದ್ದರೆ ಬಿಗ್ ಬಾಸ್ ಮನೆಯಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿ ರೀಲ್ಸ್ ಮಾಡಿದ್ದ ಯುವಕ ಇದೀಗ ಕುಂಬಳಗೋಡು ಪೊಲೀಸರ ವಶದಲ್ಲಿದ್ದಾನೆ.
‘Mummy-Ashok16’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ಯುವಕ ರೀಲ್ಸ್ ಪೋಸ್ಟ್ ಮಾಡಿದ್ದು, ಕಾರ್ಯಕ್ರಮಕ್ಕೆ ಕರೆಸದಿದ್ದರೆ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆಯ ಮಾತುಗಳನ್ನು ಹೇಳಿದ್ದನು. ಸಮಾಜದಲ್ಲಿ ಆತಂಕ ಉಂಟುಮಾಡುವ ಈ ವೀಡಿಯೋ ಬೇಗನೆ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚರಗೊಂಡಿದ್ದರು.
ಇಂತಹ ವೀಡಿಯೋಗಳು ಸಮಾಜದ ಶಾಂತಿ-ಸ್ವಾಸ್ಥ್ಯ ಹಾಳುಮಾಡುವ ಸಾಧ್ಯತೆ ಇರುವುದರಿಂದ ಕಾನೂನು ಕ್ರಮ ಅಗತ್ಯವಿದೆ ಎಂದು ಸಾರ್ವಜನಿಕರಿಂದಲೂ ಮನವಿ ಕೇಳಿಬಂದಿತ್ತು. ಇದನ್ನೇ ಆಧರಿಸಿ ಕುಂಬಳಗೋಡು ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ಕ್ರಮ ಕೈಗೊಂಡರು.
ವೀಡಿಯೋ ವೈರಲ್ ಆದ ತಕ್ಷಣ ಪೊಲೀಸರು ಅಶೋಕ್ ಎಂಬ ಯುವಕನನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿಕೊಂಡಿದ್ದಾರೆ. “ಆನ್‌ಲೈನ್‌ನಲ್ಲಿ ಹಾಕುವ ಬೆದರಿಕೆಯನ್ನು ನೇರ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಬರೆಯುವ ಅಥವಾ ಪೋಸ್ಟ್ ಮಾಡುವ ಮೊದಲು ಯೋಚಿಸಿ — ಏಕೆಂದರೆ ಒಂದು ಪೋಸ್ಟ್‌ವೇ ನಿಮ್ಮನ್ನು ಜೈಲಿಗೆ ಕಳುಹಿಸಬಹುದು” ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್‌ಬಾಸ್ ಸೀಸನ್ 12ರ ಗ್ರಾಂಡ್ ಓಪನಿಂಗ್ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‍ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈ ಸೀಸನ್‌ನಲ್ಲಿ ವಿಭಿನ್ನ ವ್ಯಕ್ತಿತ್ವದ ಕಂಟೆಸ್ಟೆಂಟ್ಸ್, ಹಾಗೂ ಅನಿರೀಕ್ಷಿತ ಟಾಸ್ಕ್‌ಗಳನ್ನು ಹೊತ್ತು ನವರಾತ್ರಿ ಹಬ್ಬದ ಹೊಸ್ತಿಲಲ್ಲಿರೋ ಕರ್ನಾಟಕಕ್ಕೆ ನವ ಸಂಭ್ರಮ ತರಲಿದೆ.