ಅಕ್ಟೋಬರ್ ತಿಂಗಳು ಕೇವಲ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಅದರೊಂದಿಗೆ ಹಲವು ಹೊಸ ನಿಯಮಗಳು ಜಾರಿಯಾಗಲಿವೆ. ಈ ಬದಲಾವಣೆಗಳು ಜನರ ದೈನಂದಿನ ಜೀವನ, ಖರ್ಚು ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಎಲ್‌ಪಿಜಿ ಗ್ಯಾಸ್ ದರದಿಂದ ಹಿಡಿದು ರೈಲು ಟಿಕೆಟ್ ಬುಕ್ಕಿಂಗ್ ವಿಧಾನ ಮತ್ತು ಯುಪಿಐ ಸೇವೆಗಳ ತನಕ ಹಲವು ಪ್ರಮುಖ ಬದಲಾವಣೆಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.
ಇನ್ನು, ಆರ್‌ಬಿಐ ಮಾನಿಟರಿ ಪಾಲಿಸಿ ಸಮಿತಿಯ ತೀರ್ಮಾನಗಳೂ ಕೂಡ ಅಕ್ಟೋಬರ್ ಮೊದಲ ದಿನವೇ ಹೊರಬೀಳಲಿದ್ದು, ಬಡ್ಡಿದರ ಮತ್ತು ಆರ್ಥಿಕ ಸ್ಥಿತಿಗತಿ ಕುರಿತು ಹೊಸ ನಿರ್ಧಾರಗಳು ಬರಬಹುದೆಂದು ನಿರೀಕ್ಷಿಸಲಾಗಿದೆ. ಇಂಧನ ಕಂಪನಿಗಳು ತಿಂಗಳ ಆರಂಭದಲ್ಲೇ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಿಸುವುದು ರೂಢಿಯಾಗಿರುವುದರಿಂದ ಅಕ್ಟೋಬರ್ ತಿಂಗಳಲ್ಲೂ ದರ ಏರಿಕೆಯಾಗುತ್ತದೆಯೇ ಅಥವಾ ಇಳಿಕೆಯಾಗುತ್ತದೆಯೇ ಎಂಬುದರತ್ತ ಜನರ ಕಣ್ಣು ನೆಟ್ಟಿದೆ. ಯುಪಿಐ ಸೇವೆಯಲ್ಲಿ ‘ಕಲೆಕ್ಟ್ ರಿಕ್ವೆಸ್ಟ್’ ಆಯ್ಕೆಯನ್ನು ತೆಗೆದು ಹಾಕುವ ನಿರ್ಧಾರವು ಡಿಜಿಟಲ್ ಪೇಮೆಂಟ್ ಸುರಕ್ಷತೆಯನ್ನು ಹೆಚ್ಚಿಸಲಿದೆ.
ಅಕ್ಟೋಬರ್ 1ರಿಂದ ಜಾರಿಗೆ ಬರುವ ಬದಲಾವಣೆಗಳು
ಅಕ್ಟೋಬರ್ 1ರಂದು ಎಲ್‌ಪಿಜಿ ಗೃಹ ಹಾಗೂ ವಾಣಿಜ್ಯ ಸಿಲಿಂಡರ್ ದರಗಳನ್ನು ಪರಿಷ್ಕರಿಸಲಾಗುತ್ತದೆ.
ಆಧಾರ್ ದೃಢೀಕರಿಸಿದ ಪ್ರಯಾಣಿಕರಿಗೆ ರೈಲು ಟಿಕೆಟ್ ಬುಕ್ಕಿಂಗ್‌ನಲ್ಲಿ 15 ನಿಮಿಷಗಳ ಮುಂಚಿತ ಅವಕಾಶ ಲಭ್ಯವಾಗಲಿದೆ.
ಯುಪಿಐ ಸೇವೆಯಲ್ಲಿ “ಕಲೆಕ್ಟ್ ರಿಕ್ವೆಸ್ಟ್” ಫೀಚರ್ ಅನ್ನು ರದ್ದುಗೊಳಿಸಲಾಗುತ್ತಿದ್ದು, ವಂಚನೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.
ಆರ್‌ಬಿಐ ಮಾನಿಟರಿ ಪಾಲಿಸಿ ಸಮಿತಿಯ ತೀರ್ಮಾನಗಳು ಅಕ್ಟೋಬರ್ 1ರಂದು ಘೋಷಣೆಯಾಗಲಿವೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಅಕ್ಟೋಬರ್ 1ರಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಬಹು ಯೋಜನೆ ಚೌಕಟ್ಟು (MSF) ನಿಯಮವನ್ನು ಜಾರಿಗೆ ತರುತ್ತದೆ.
ಅಕ್ಟೋಬರ್ 1ರಿಂದ ದೇಶದಲ್ಲಿ ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಮತ್ತು ನೈಜ ಹಣದ ಆಟಗಳಿಗೆ ಸಂಪೂರ್ಣ ನಿಷೇಧ ಜಾರಿಯಾಗಲಿದೆ.
ಅಕ್ಟೋಬರ್ 10-11ರಂದು ನಡೆಯುವ ಸಭೆಯಲ್ಲಿ ಇಪಿಎಫ್‌ಒ 3.0 ಅಡಿಯಲ್ಲಿ ಎಟಿಎಂಗಳ ಮೂಲಕ ನೇರವಾಗಿ ಪಿಎಫ್ ಹಣ ಹಿಂಪಡೆಯುವ ಅವಕಾಶ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.