ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯಾದ್ಯಂತ ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಿದೆ. ಆಯೋಗವು ಸಮೀಕ್ಷೆಯಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಕುಟುಂಬ ಬಲವಂತದಿಂದ ಮಾಹಿತಿ ನೀಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ಬಳಿಕ, ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಹಾಗೂ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ 22-09-2025 ರಿಂದ ಪ್ರಾರಂಭಿಸಿದ್ದು, ಪ್ರಗತಿಯಲ್ಲಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಸಂಪೂಣ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ, ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ/ಕುಟುಂಬಗಳ ಸ್ವಯಂ ಇಚ್ಛೆಗೆ ಬಿಡಲಾಗಿದೆಯೆಂದೂ ಹಾಗೂ ಮಾಹಿತಿಯನ್ನು ನೀಡುವ ಬಗ್ಗೆ ಆಯೋಗ ಒತ್ತಾಯ ಮಾಡುತ್ತಿಲ್ಲವೆಂದು ಸ್ಪಷ್ಟಿಕರಿಸಲಾಗಿದೆಯೆಂದು ಎಂದು ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಮೀಕ್ಷೆಯ ಸಮಯದಲ್ಲಿ ಜನರು, ಕುಟುಂಬಗಳು ಯಾವುದೇ ಮಾಹಿತಿಯನ್ನು ನೀಡಲು ಸಿಬ್ಬಂದಿ ಬಲವಂತಪಡಿಸುವಂತಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಈ ಸಮೀಕ್ಷೆಯ ಉದ್ದೇಶ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಂಶಗಳ ನಿಖರ ಮಾಹಿತಿಯನ್ನು ಸಂಗ್ರಹಿಸುವುದಾಗಿದ್ದು, ಭಾಗವಹಿಸುವಿಕೆ ಐಚ್ಛಿಕವಾಗಿದ್ದು, ಯಾರ ಮೇಲೂ ಒತ್ತಡವಿಲ್ಲ ಎಂದು ಸಂದೇಶ ರವಾನಿಸಿದೆ.