14 ವರ್ಷದೊಳಗಿನ 40 ಬಾಲಕಿಯರನ್ನು ಉತ್ತರ ಪ್ರದೇಶದ ಅಕ್ರಮ ಮದರಾಸದ ಶೌಚಾಲಯದಲ್ಲಿ ಕೂಡಿಟ್ಟ ಆಘಾತಕಾರಿ ವಿಷಯ ಅಧಿಕಾರಿಗಳ ದಾಳಿಯ ವೇಳೆ ಬೆಳಕಿಗೆ ಬಂದಿದೆ.
ಪಯಾಗ್ ಪುರದ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ಅಶ್ವಿನಿ ಕುಮಾರ್ ಪಾಂಡೆ ನೇತೃತ್ವದಲ್ಲಿ ಪಹಲ್ವಾರಾ ಗ್ರಾಮದಲ್ಲಿರುವ ಮೂರಂತಸ್ತಿನ ಕಟ್ಟಡದಲ್ಲಿ ನೋಂದಾಣಿ ಮಾಡದೇ ನಡೆಸುತ್ತಿದ್ದ ಮದರಸಾ ಮೇಲೆ ದಾಳಿ ಮಾಡಿದಾಗ ಆಘಾತಕಾರಿ ವಿಷಯ ಪತ್ತೆಯಾಗಿದೆ.
ಮದರಸಾ ಮೇಲೆ ದಾಳಿ ಮಾಡಿದಾಗ ಕಟ್ಟಡದ ಮೇಲಂತಸ್ತಿಗೆ ಹೋಗಲು ತಡೆಯಲಾಯಿತು. ಈ ವೇಳೆ ಪೊಲೀಸರ ಬೆಂಗಾವಲಿನಿಂದ ಮೇಲೆ ಹೋಗಿ ಪರಿಶೀಲನೆ ಮಾಡಿದಾಗ 9ರಿಂದ 14 ವರ್ಷದ 40 ಮಕ್ಕಳು ಪತ್ತೆಯಾಗಿದ್ದಾರೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಮಹಿಳಾ ಪೊಲೀಸ್ ಶೌಚಾಲಯದ ಬಾಗಿಲು ತೆರೆದಾಗ 40 ಮಕ್ಕಳು ಇದ್ದರು. ಒಬ್ಬರ ನಂತರ ಒಬ್ಬರು ಹೊರಗೆ ಬಂದಿದ್ದು, ಭಯದಲ್ಲಿದ್ದ ಅವರು ಏನು ಹೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲ. ಆದ್ದರಿಂದ ಅವರನ್ನು ಸಮಾಧಾನಗೊಳಿಸಿದ ನಂತರ ವಿಚಾರಣೆ ನಡೆಸಲಾಗುವುದು ಎಂದು ಅಶ್ವಿನಿ ಕುಮಾರ್ ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ ಮೂರು ವರ್ಷಗಳಿಂದ ಅಕ್ರಮವಾಗಿ ಮದರಸಾ ನಡೆಸಲಾಗುತ್ತಿತ್ತು. ದಾಖಲಾತಿ ತೋರಿಸಿ ಎಂದು ಕೇಳಿದರೆ ಯಾವುದೇ ದಾಖಲೆ ತೋರಿಸುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.
2023ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಬಹರೇಚ್ ನಲ್ಲಿ ಸುಮಾರು 495 ಅಕ್ರಮ ಮದರಾಸಗಳು ನಡೆಸಲಾಗುತ್ತಿದೆ. ಈ ಮದರಸಾಗಳನ್ನು ಪತ್ತೆ ಹಚ್ಚಿ ತಪಾಸಣೆ ಮಾಡಲಾಗುತ್ತಿದೆ.
ಉತ್ತರ ಪ್ರದೇಶ ಅಕ್ರಮವಾಗಿ ನಡೆಯುತ್ತಿರುವ ಮದರಸಾಗಳನ್ನು ತಡೆಯಲು ಸೂಕ್ತ ಕಾನೂನು ರೂಪಿಸದೇ ಇರುವುದೇ ಈ ಎಲ್ಲಾ ಅನಾಹುತಗಳಿಗೆ ಕಾರಣ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಕ್ರಮ ಮದರಸಾಗಳನ್ನೇ ಮುಂದುವರಿಸಿದ್ದರೆ ಇನ್ನು ಕೆಲವರು ಪ್ರಕರಣ ದಾಖಲಾದ ಮೇಲೂ ನಡೆಸುತ್ತಿದ್ದಾರೆ.