ಭಕ್ತಿಗೀತೆಗಳ ಸಾಲಿನಲ್ಲಿ, ಅಜರಾಮರ ಸ್ಥಾನ ಪಡೆದಿರುವ ಕನ್ನಡದ ಪ್ರಸಿದ್ಧ ಗೀತೆ ‘ಕಮಲದ ಮೊಗದೊಳೆ’ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಮನಸೋತಿದ್ದಾರೆ.
ಖ್ಯಾತ ಗಾಯಕಿ ಎಸ್. ಜಾನಕಿ ಅವರ ಮಧುರ ಧ್ವನಿಯಲ್ಲಿ ಮೂಡಿ ಬಂದ ಈ ಹಾಡನ್ನು ಪ್ರಧಾನಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಜೊತೆಗೆ ನವರಾತ್ರಿಯ ಶುಭಾಶಯವನ್ನು ದೇಶದ ಜನತೆಗೆ ತಿಳಿಸಿದ್ದಾರೆ.
1984ರಲ್ಲಿ ಬಿಡುಗಡೆಯಾದ ‘ಹೊಸ ಇತಿಹಾಸ’ ಚಿತ್ರದಲ್ಲಿನ ಈ ಹಾಡು, ಇಂದಿಗೂ ಪ್ರತೀ ನವರಾತ್ರಿಯ ಸಂದರ್ಭದಲ್ಲಿ ಎಲ್ಲೆಡೆ ಮೊಳಗುತ್ತಲೇ ಇರುತ್ತದೆ. ಹಾಡಿನ ಸೊಗಸು, ಸಾಹಿತ್ಯದ ಆಳ ಮತ್ತು ಜಾನಕಿಯವರ ಗಾಯನದ ಮಂತ್ರಮುಗ್ಧ ಶೈಲಿ ಇದನ್ನು ಶಾಶ್ವತಗೊಳಿಸಿದೆ. ಈಗ ಇದೇ ಗೀತೆ ಪ್ರಧಾನಿ ಮೋದಿಯವರ ಮನಸನ್ನೂ ಕದ್ದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪುನಃ ವೈರಲ್ ಆಗುತ್ತಿದೆ.
ಮೋದಿಯವರು ತಮ್ಮ ಟ್ವೀಟ್‌ನಲ್ಲಿ: “ದೇವಿಯು ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ. ಅವಳ ಪ್ರೀತಿ ಮತ್ತು ಕರುಣೆ ಪ್ರತಿಯೊಬ್ಬರ ಜೀವನಕ್ಕೆ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ” ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರಧಾನಿ ಹಂಚಿಕೊಂಡ ಈ ವಿಡಿಯೋ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಕನ್ನಡಿಗರು ತಮ್ಮ ಹರ್ಷವನ್ನು “ನಮ್ಮ ಕನ್ನಡ, ನಮ್ಮ ಹೆಮ್ಮೆ” ಎಂಬ ಪ್ರತಿಕ್ರಿಯೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ನವರಾತ್ರಿಯ ಈ ಸಾಂಸ್ಕೃತಿಕ ಸಂಭ್ರಮದಲ್ಲಿ ಕನ್ನಡದ ಈ ಭಕ್ತಿಗೀತೆ ಮತ್ತೊಮ್ಮೆ ದೇಶವ್ಯಾಪಿ ಚರ್ಚೆಯಾಗುತ್ತಿದೆ.