ಇತ್ತೀಚೆಗೆ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮಹಿಳಾ ವಿಜ್ಞಾನಿಯೊಬ್ಬರು ಡಿಜಿಟಲ್ ಅರೆಸ್ಟ್‌ಗೆ ಹೆದರಿ 8.80 ಲಕ್ಷ ರೂ. ಕಳೆದುಕೊಂಡಿದ್ದಾರೆ.
ತಾವು ಸಿಬಿಐ ಅಧಿಕಾರಿಗಳು (CBI Officers) ಅಂತ ಹೇಳಿಕೊಂಡು, ಸೈಬರ್ ವಂಚಕರು ಮೂರು ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ 8.80 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ವರದಿಗಳ ಪ್ರಕಾರ 49 ವರ್ಷದ ಮಹಿಳಾ ವಿಜ್ಞಾನಿ ನೀಡಿದ ದೂರಿನ ಆದಾರದ ಮೇಲೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸೈಬರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘‘ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬೇರೆಯವರು ಬಳಸುತ್ತಿದ್ದು, ಮಾನವ ಕಳ್ಳಸಾಗಣೆ ಸೇರಿ 17 ಪ್ರಕರಣಗಳು ದಾಖಲಾಗಿವೆ’’ ಎಂದು ಅಪರಿಚಿತನೊಬ್ಬ ವಿಜ್ಞಾನಿಗೆ ಕರೆ ಮಾಡಿ ಬೆದರಿಸಿದ್ದಾನೆ. ನಂತರ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ‘ಪ್ರಕರಣದ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ತನಿಖೆಗೆ ಸಹಕರಿಸದಿದ್ದರೆ ಬಂಧಿಸಲಾಗುವುದು’ ಎಂದು ಹೇಳಿದ್ದಾನೆ.
ತನಿಖೆ ಪೂರ್ಣವಾಗುವ ತನಕ ಮನೆಯವರಿಗೆ ತಿಳಿಸಬಾರದು. ಒಂದು ವೇಳೆ ಮನೆಯವರಿಗೆ ಹೇಳಿದರೆ ಹೊರಗಡೆ ನಿಮ್ಮನ್ನು ಕೂಡಲೇ ಬಂದಿಸಲಿದ್ದಾರೆ. ನಾವು ಹೇಳಿದಂತೆ ಕೇಳಿದರೆ ಸಹಾಯ ಮಾಡುತ್ತೇನೆ ಎಂದು ನಂಬಿಸಿದ್ದಾನೆ. ಸೈಬರ್ ವಂಚಕನ ಮಾತುಗಳನ್ನು ನಿಜವೆಂದು ನಂಬಿ ಮೂರು ದಿನ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದ ವಿಜ್ಞಾನಿ 8.80 ಲಕ್ಷ ರೂ. ವಂಚರ ಬ್ಯಾಂಕ್ ಅಕೌಂಟಿಗೆ ವರ್ಗಾಯಿಸಿದ್ದರು.
ವಂಚಕರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ, ಕುಟುಂಬಸ್ಥರ ನಡುವೆ ಈ ಚರ್ಚಿಸಿದ್ದಾರೆ. ಆಗ ಇದು ಸೈಬರ್ ವಂಚಕರ ಕೃತ್ಯ ಎಂಬುದು ಗೊತ್ತಾಗಿ ತಡವಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.