ಬೆಳಗಾವಿಯಲ್ಲಿ ನಡೆದ ರಾಜಕೀಯ ಸಮಾವೇಶದ ವೇಳೆ ಕರ್ತವ್ಯದಲ್ಲಿದ್ದ ಅಂದಿನ ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಮೇಲೆ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ್ದು, ಅವರ ವಿರುದ್ಧ ಎಫ್‌ಐಆರ್
ದಾಖಲಿಸಬೇಕೆಂದು ಕೋರಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.
ದೂರು ಸ್ವೀಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಕ್ಟೋಬರ್ 6, 2025 ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ಈ ಬೆಳವಣಿಗೆ ದೊಡ್ಡ ಕಾನೂನು ಚರ್ಚೆಗೆ ಮಅತ್ರವಲ್ಲ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಜೂನ್ 6, 2025 ರಂದು ಬೆಳಗಾವಿಯಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಯುತ್ತಿದ್ದಾಗ ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಸಮವಸ್ತ್ರ ತೊಟ್ಟು ಕರ್ತವ್ಯದಲ್ಲಿ ದ್ದರು. ಆಗ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಕೈ ಎತ್ತಿದ್ದರು ಎಂದು ದೂರುದಾರ ಆರೋಪಿಸಿದ್ದಾರೆ.
ಈ ಸಂಬಂಧ ಭೀಮಪ್ಪ ಗಡಾದ್ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿ ಇದು “ಮೂರನೇ ವ್ಯಕ್ತಿ ನೀಡಿದ ದೂರು” ಎಂದು ಉತ್ತರರಿಸಿದ್ದರು. ಈ ಕಾರಣಕ್ಕೆ ಭೀಮಪ್ಪ ಗಡಾದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಭೀಮಪ್ಪ ಗಡಾದ್ ಅವರು ದೂರು ಅರ್ಜಿಯೊಂದಿಗೆ ಸಂಬಂಧಿತ ವೀಡಿಯೊ ದೃಶ್ಯಗಳು, ಫೋಟೋಗಳು ಹಾಗೂ ಮಾಧ್ಯಮ ವರದಿಗಳ ದಾಖಲೆಗಳ ಲಿಂಕ್ ನೀಡಿದ್ದಾರೆ.