Menu

ಕಾವೇರಿ ಆರತಿಯಿಂದ ಒಂದೂವರೆ ಸಾವಿರ ಜನರಿಗೆ ಉದ್ಯೋಗ ಸೃಷ್ಟಿ: ಡಿಕೆ ಶಿವಕುಮಾರ್‌

‌ಕಾವೇರಿ ಆರತಿಯನ್ನು ನಾವು ಪ್ರಾರಂಭ ಮಾಡಿದ್ದೇವೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ನಂಬಿದ್ದೇನೆ. ಈಗ ಕೆಆರ್ ಎಸ್ ಬಳಿ ಕಾವೇರಿ ಆರತಿ ಮಾಡಲು ಮುಂದಾಗಿದ್ದೇವೆ. ಬಿಡಬ್ಲ್ಯೂ ಎಸ್ಎಸ್ ಬಿ ಅಧ್ಯಕ್ಷರ ನೇತೃತ್ವದಲ್ಲೇ ಇದಕ್ಕೆ ಸಮಿತಿ ರಚಿಸಲಾಗಿದೆ. ಅವರು ಉತ್ತಮ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಇದರಿಂದ ಆ ಭಾಗದಲ್ಲಿ ಒಂದೂವರೆ ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ವಿಚಾರವಾಗಿ ಮಂಡ್ಯ ಜಿಲ್ಲೆಯ ರೈತ ಸಂಘದವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ) ವತಿಯಿಂದ ಕಳೆದ ಮಾರ್ಚ್ 21 ರಿಂದ 28 ರವರೆಗೆ ನಡೆದ ಜಲ ಸಂರಕ್ಷಣೆ ಅಭಿಯಾನ ಸಪ್ತಾಹದಲ್ಲಿ 5,33,642 ಪ್ರತಿಜ್ಞೆ ಸ್ವೀಕರಿಸಿ, ಜಲ ಸಂರಕ್ಷಣೆಯಲ್ಲಿ ಗಿನ್ನಿಸ್ ವಿಶ್ವದಾಖಲೆ ಬರೆದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬುಧವಾರ ಅಧಿಕೃತ ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದರು. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಸ್ವಪನಿಲ್ ದಂಗರಿಕರ್  ಡಿ.ಕೆ. ಶಿವಕುಮಾರ್ ಅವರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ವಿತರಿಸಿದರು

ಕಾವೇರಿ ಆರತಿ ಬಗ್ಗೆ ಇರುವ ಅನುಮಾನಗಳನ್ನು ಬಗೆಹರಿಸಲು ಜಿಲ್ಲಾ ಮಂತ್ರಿಗಳ ಜತೆ ಸಭೆ ಮಾಡಲಿದ್ದೇನೆ. ನಾವು ಕಾವೇರಿಯನ್ನು ತಾಯಿ ಎಂದು ಕರೆಯುತ್ತೇವೆ. ನೀರಿಗೆ ಜಾತಿ, ಭಾಷೆ, ಧರ್ಮ ಇಲ್ಲ. ನೀರು ಎಲ್ಲರಿಗೂ ಬೇಕು. ಕುಡಿಯಲು, ವ್ಯವಸಾಯಕ್ಕೆ, ಕೈಗಾರಿಕೆ ಎಲ್ಲದಕ್ಕೂ ನೀರು ಅಗತ್ಯ. ಈ ನೀರಿಗಾಗಿ ಉತ್ತಮ ಮಳೆಗಾಗಿ ಪ್ರಾರ್ಥನೆ ಮಾಡುವುದರಲ್ಲಿ ತೊಂದರೆ ಏನು? ಕಾವೇರಿ ತುಂಬಿ ಹರಿಯದಿದ್ದರೆ ಅನೇಕ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಡಿಸಿಎಂ ಹೇಳಿದರು.

ಪರಿಸರ ಸಂರಕ್ಷಣೆ ಕುರಿತು ನಿನ್ನೆ ಶಾಲಾ ಮಕ್ಕಳ ಕಾರ್ಯಕ್ರಮ ಮಾಡಿದ್ದೇವೆ. ಮಕ್ಕಳಿಗೆ ಗಿಡ ಕೊಟ್ಟು ಅದನ್ನು ಬೆಳೆಸಿ ಮರ ಮಾಡುವ ಜವಾಬ್ದಾರಿಯನ್ನು ನೀಡಿದ್ದೇವೆ. ಪರಿಸರ ಕಾಪಾಡಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ನಾವು ನೀರನ್ನು ಉಳಿಸಲೇಬೇಕು. ಈ ನೀರನ್ನು ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಡ್ಬ್ಲೂಎಸ್ಎಸ್ ಬಿ ವತಿಯಿಂದ ಒಂದು ವಾರಗಳ ಕಾಲ ಪ್ರತಿಜ್ಞಾ ಸ್ವೀಕಾರ ಅಭಿಯಾನ ಮಾಡಿದ್ದೆವು. ಈ ಅಭಿಯಾನದಲ್ಲಿ 5,33,642 ಮಂದಿ ಪ್ರತಿಜ್ಞೆ ಸ್ವೀಕರಿಸಿದ್ದರು. ಆಮೂಲಕ ಇದು ಗಿನ್ನಿಸ್ ದಾಖಲೆ ಬರೆದಿದೆ. ದೆಹಲಿ ಸೇರಿದಂತೆ ಬೇರೆ ನಗರಗಳಲ್ಲಿ ಕುಡಿಯುವ ನೀರಿನ ಸಂಪರ್ಕವೇ ಬೇರೆ, ದಿನಬಳಕೆ ಉದ್ದೇಶಕ್ಕೆ ಬಳಸುವ ನೀರಿನ ಸಂಪರ್ಕವೇ ಬೇರೆ ಇದೆ. ಆದರೆ ನಮ್ಮಲ್ಲಿ ಕುಡಿಯಲು, ವಾಹನ ತೊಳೆಯಲು, ಗಿಡಗಳಿಗೆ ಹಾಕಲು ಎಲ್ಲದಕ್ಕೂ ಕುಡಿಯುವ ನೀರನ್ನೇ ಬಳಸಲಾಗುತ್ತಿದೆ. ಸುಮಾರು 35% ನಷ್ಟು ಜನ ಕುಡಿಯುವ ನೀರಿನ ಬಿಲ್ ಕಟ್ಟುತ್ತಿಲ್ಲ. ಆದರೂ ಮಂಡಳಿಯು ಕೆಲಸ ಮಾಡುತ್ತಿದೆ. ಬೆಂಗಳೂರಿನ 2 ಕೋಟಿ ನಾಗರಿಕರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸುತ್ತಿದ್ದೇವೆ. ರಾಮ್ ಪ್ರಸಾದ್ ಮನೋಹರ್ ಅವರ ನೇತೃತ್ವದಲ್ಲಿ ಮಂಡಳಿಯು ಹೊಸ ಆವಿಷ್ಕಾರಿ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.

ಬದುಕಿನಲ್ಲಿ ನಾವೇನಾದರೂ ಸಾಧನೆ ಮಾಡಬೇಕು. ಬೆಂಗಳೂರು ಯೋಜಿತ ನಗರವಲ್ಲ. ಇಲ್ಲಿನ ಜನಸಂಖ್ಯೆ ಬಹಳ ದೊಡ್ಡದಾಗಿ ಬೆಳೆದಿದೆ. ಹೀಗಾಗಿ ಇಲ್ಲಿ ಗ್ರೇಟರ್ ಬೆಂಗಳೂರನ್ನು ಘೋಷಣೆ ಮಾಡಿ, ಮತ್ತಷ್ಟು ಪ್ರದೇಶವನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ ಎಷ್ಟು ಪಾಲಿಕೆ ರಚಿಸಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ ಎಂದರು.

ಬೆಂಗಳೂರಿನ ಒಳಗೆ 1.40 ಕೋಟಿ ಜನಸಂಖ್ಯೆ ಇದ್ದು, ನಗರದ ಹೊರಭಾಗದಲ್ಲಿ ಆನೇಕಲ್ ಹಾಗೂ ಇತರೆ ಭಾಗದಲ್ಲಿ 50 ಲಕ್ಷ ಜನಸಂಖ್ಯೆ ಇದೆ. ಬೆಂಗಳೂರಿಗೆ ಹೊಸದಾಗಿ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಂತೆ ಬಸ್, ರೈಲು ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಕಳೆದ 10 ವರ್ಷಗಳಿಂದ ನೀರಿನ ದರ ಏರಿಕೆ ಮಾಡಿರಲಿಲ್ಲ. ಇದರಿಂದ ಮಂಡಳಿಯು ವಾರ್ಷಿಕವಾಗಿ 400-500 ಕೋಟಿ ರೂ. ನಷ್ಟ ಅನುಭವಿಸುವಂತಾಗಿದೆ. ದಾಖಲೆ ಪ್ರಕಾರ ಒಂದು ಸಾವಿರ ಕೋಟಿವರೆಗೂ ನಷ್ಟವಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.

ನಾನು ಇದರ ಜವಾಬ್ದಾರಿ ವಹಿಸಿಕೊಂಡ ಬಳಿಕ ನೀರಿನ ದರ ಏರಿಕೆಗೆ ಅನುಮತಿ ನೀಡಿದ್ದೇನೆ. ಟೀಕೆಗಳು ವ್ಯಕ್ತವಾಗುವುದು ಸಹಜ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಟೀಕೆ ಮಾಡುವವರು ಮಾಡುತ್ತಿರಲಿ ಎಂದು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ದಿಟ್ಟ ತೀರ್ಮಾನ ಮಾಡಿದೆ. ಈ ದರ ಪರಿಷ್ಕರಣೆಯಿಂದ ವಾರ್ಷಿಕವಾಗಿ 500 ಕೋಟಿಯಷ್ಟು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ. ನಷ್ಟವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಮಂಡಳಿ ಸಿಬ್ಬಂದಿ ಬಹಳ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಜಾರಿಗೆ ಸಾಕಷ್ಟು ಅಡಚಣೆಗಳು ಎದುರಾಗಿದ್ದವು. ಅದೆಲ್ಲವನ್ನು ನಿವಾರಿಸಿ ಜಾರಿ ಮಾಡಲಾಗಿದೆ. ಹೊಸ ಸಂಪರ್ಕ ನೀಡಲು ಇದ್ದ ಸಮಸ್ಯೆಗಳನ್ನು ನಿವಾರಣೆ ಮಾಡಲಾಗಿದೆ. ಸಂಚಾರಿ ಕಾವೇರಿ ಯೋಜನೆ ಮೂಲಕ ಜನರಿಗೆ ಕಡಿಮೆ ಬೆಲೆಗೆ ಪರಿಶುದ್ಧವಾದ ನೀರನ್ನು ನೀಡಲಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಒಳಚರಂಡಿ ವಿಚಾರವೂ ಒಂದು ಸವಾಲಾಗಿದೆ. ಕೊಳಚೆ ನೀರನ್ನು ಉತ್ತಮ ಕೆರೆಗಳಿಗೆ ಬಿಡಲಾಗುತ್ತಿದೆ. ಇದನ್ನು ಸಂಸ್ಕರಿಸಿ ಮರುಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *