ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮದ್ದಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ಪತ್ನಿ ಮಣ್ಣಿನಲ್ಲಿ ಹೂತಿಟ್ಟ ಪ್ರಕರಣ ಬಯಲಾಗಿದೆ. ಗಂಡನ ತಲೆಗೆ ರಾಡ್ ನಿಂದ ಹೊಡೆದು ಪತ್ನಿ ಕೊಲೆ ಮಾಡಿಸಿ ಮಣ್ಣಲ್ಲಿ ಹೂತಿಟ್ಟು ನಾಪತ್ತೆ ಪ್ರಕರಣ ದಾಖಲಿಸಿದ್ದಳು.
ನಾಪತ್ತೆ ಪ್ರಕರಣದ ತನಿಖೆ ಆರಂಭಿಸಿದ ಅಬ್ಬಿನಹೊಳೆ ಪೊಲೀಸರಿಗೆ ಆಕೆಯ ಬಗ್ಗೆ ಅನುಮಾನ ಉಂಟಾಗಿತ್ತು. ವಿಚಾರಣೆ ನಡೆಸಿದಾಗ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ಬಾಲಣ್ಣ (52) ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿಗಳಾದ ಪತ್ನಿ ಮಮತ ಹಾಗೂ ಆಕೆಯ ಪ್ರಿಯಕರ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಸಿಪಿಐ ಗುಡ್ಡಪ್ಪ, ಪಿಎಸ್ಐ ದೇವರಾಜ್ ಭೇಟಿ ಕೃತ್ಯ ನಡೆದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ತಾಯಿ ಜೊತೆ ಸ್ನೇಹಿತನ ಸೋದರ ಅಕ್ರಮ ಸಂಬಂಧ: ಸ್ನೇಹಿತನ ಕೊಲೆ
ಬಾಗಲಕೋಟೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವೊಂದನ್ನು ಪೊಲೀಸರು ಬಯಲಿಗೆಳೆದಿದ್ದು, ಇದು ಅಕ್ರಮ ಸಂಬಂಧವೊಂದರ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂಬುದು ತಿಳಿದು ಬಂದಿದೆ. ಬಸಯ್ಯ ಮಠಪತಿ (34) ಹಾಗೂ ಬಸವರಾಜ ಲಿಂಗನೂರು (24) ಇಬ್ಬರೂ ಸ್ನೇಹಿತರು, ಸೆಪ್ಟೆಂಬರ್ 12 ರಂದು ರಾತ್ರಿ ಪಾರ್ಟಿ ಮಾಡಿ ಮನೆಗೆ ತೆರಳಿದ್ದರು. ಮಾರ್ಗ ಮಧ್ಯೆ ಬಸಯ್ಯ ಮಠಪತಿ ಹೆಣವಾಗಿದ್ದ. ಈತನ ಜೊತೆಗೆ ಮದ್ಯ ಸೇವಿಸಿದ್ದ ಬಸವರಾಜ ಲಿಂಗನೂರು ನಾಪತ್ತೆಯಾಗಿದ್ದ.
ನಾಪತ್ತೆಯಾಗಿದ್ದ ಬಸವರಾಜ ಲಿಂಗನೂರು ತಾಯಿಗೆ ಕರೆ ಮಾಡಿ, ‘ಮನೆಗೆ ಪೊಲೀಸರು ಬಂದಿದ್ದರಾ’ ಎಂದು ವಿಚಾರಿಸಿದ್ದ. ಸಿಸಿ ಕ್ಯಾಮರಾ ದೃಶ್ಯ ಹಾಗೂ ಆ ಕರೆ ಆಧರಿಸಿ ಬೀಳಗಿ ಪೊಲೀಸರು ಕೊಲೆಗಾರನ ಪತ್ತೆ ಹಚ್ಚಿದ್ದಾರೆ. ಬಸವರಾಜ ಲಿಂಗನೂರ ಕೊಲೆ ಆರೋಪಿಯಾಗಿದ್ದು ಬಂಧಿಸಿದ್ದಾರೆ.
ಬಸವರಾಜ ಲಿಂಗನೂರ ತಾಯಿ ಜತೆ ಬಸಯ್ಯ ಮಠಪತಿ ಸಹೋದರ ಅಕ್ರಮ ಸಂಬಧ ಹೊಂದಿದ್ದ. ಈ ಕಾರಣಕ್ಕೆ ಕುಡಿತದ ಅಮಲಿನಲ್ಲಿದ್ದಾಗ ಸ್ನೇಹಿತರ ಮಧ್ಯೆ ಜಗಳ ಶುರುವಾಗಿದೆ, ಟವೆಲ್ನಿಂದ ಬಿಗಿದು ಬಸಯ್ಯನನ್ನು ಬಸವರಾಜ ಲಿಂಗನೂರು ಕೊಲೆ ಮಾಡಿದ್ದಾನೆ. ನಂತರ ಬೈಕ್ ತೆಗೆದುಕೊಂಡು ಮಹಾರಾಷ್ಟ್ರ ಕಡೆ ಪರಾರಿಯಾಗಿದ್ದ. ಮಾರ್ಗ ಮಧ್ಯೆ ಕೃಷ್ಣಾ ನದಿಯಲ್ಲಿ ಟವೆಲ್ ಎಸೆದಿದ್ದ. ಸೊಲ್ಲಾಪುರದಿಂದ ತಾಯಿಗೆ ಕರೆ ಮಾಡಿದ್ದ. ಆ ಮೂಲಕ ಆತ ಇರುವ ಜಾಗ ಪೊಲೀಸರಿಗೆ ಗೊತ್ತಾಗಿ ಪ್ರಕರಣವನ್ನು ಬೇಧಿಸಿದ್ದಾರೆ.