Sunday, September 28, 2025
Menu

NW KRTC ಅಧ್ಯಕ್ಷ ಸ್ಥಾನದಿಂದ ರಾಜು ಕಾಗೆ ವಜಾ ಇಲ್ಲ, ಪ್ರಿಂಟ್‌ ಮಿಸ್ಟೇಕ್‌ ಎಂದ ಸಿಎಂ

ಕಾಗವಾಡ ಕ್ಷೇತ್ರದ ಕಾಂಗ್ರೆಸ್​​​ ಶಾಸಕ ರಾಜು ಕಾಗೆ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನ ಸೌಧದಲ್ಲಿ ಭೇಟಿಯಾಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಎಐಸಿಸಿ ಅರುಣ್ ಪಾಟೀಲ್ ಹೆಸರು ಉಲ್ಲೇಖಿಸಿರುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ನಿಮ್ಮನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದು, ಪ್ರಿಂಟ್​ ಮಿಸ್ಟೇಕ್‌ ಆಗಿ ಗೊಂದಲವುಂಟಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲ. ನಿಮ್ಮನ್ನೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸರ್ಕಾರಕ್ಕೆ ಮುಜುಗರ ಆಗುವಂತೆ ಹೇಳಿಕೆ ನೀಡಿದ್ದ ಕಾರಣ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ಶಾಸಕ ರಾಜು ಕಾಗೆಯವರನ್ನು ವಜಾಗೊಳಿಸಲಾಗಿದೆ, ಆ ಹುದ್ದೆಗೆ ಅರುಣ್ ಪಾಟೀಲ್ ನೇಮಕಕ್ಕೆ ಹೈಕಮಾಂಡ್ ನಿರ್ಧರಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಸಿಎಂ ಸಿದ್ದರಾಮಯ್ಯ ಅವರಿಗೆ ಪಟ್ಟಿ ಕಳಿಸಿದ್ದಾರೆಂಬ ಸುದ್ದಿ ಹರಿದಾಡಿತ್ತು.

ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಗೆಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಬಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ರಾಜ್ಯದ ಒಟ್ಟು 39 ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಪಟ್ಟಿಯನ್ನ ಎಐಸಿಸಿ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರ ಹೆಸರು ಅರುಣ್​ ಪಾಟೀಲ್​ ಇತ್ತು.

ಈ ಗೊಂದಲ ವಿಚಾರವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಾಲಿ ಅಧ್ಯಕ್ಷ, ಶಾಸಕ ರಾಜು ಕಾಗೆ ಅವರಿಗೆ ಸ್ವತಃ ಸಿಎಂ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಸಿಎಂ ಹೇಳಿರುವಂತೆ ಇದು ನಿಜಕ್ಕೂ ಪ್ರಿಂಟ್​ ಮಿಸ್ಟೇಕ್‌ ಆಗಿರುವುದೇ ಅಥವಾ ಪಟ್ಟಿಯಲ್ಲಿ ಅರುಣ್​ ಪಾಟೀಲ್ ಹೆಸರು ಉಲ್ಲೇಖದ ಹಿಂದೆ ಬೇರೆ ರಾಜಕೀಯ ಲೆಕ್ಕಾಚಾರಗಳಿತ್ತಾ ಎಂಬುದು ರಾಜು ಕಾಗೆ ಬೆಂಬಲಿಗರ ಪ್ರಶ್ನೆ.

Related Posts

Leave a Reply

Your email address will not be published. Required fields are marked *