ಪಕ್ಷ ವಿರೋಧಿ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂಥ ಹೇಳಿಕೆ ನೀಡಿದ ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ ಹೈ ಕಮಾಂಡ್ ವಜಾಗೊಳಿಸಿದೆ.
ಅರುಣ್ ಪಾಟೀಲ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರು ಸಿಎಂ ಸಿದ್ದರಾಮಯ್ಯಗೆ ಅಂತಿಮ ಪಟ್ಟಿ ಕಳಿಸಿದ್ದಾರೆ. ಸರ್ಕಾರಕ್ಕೆ ಮುಜುಗರ ಉಂಟುಮಾಡುವಂಥ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಈ ಮೂಲಕ ಪ್ರಬಲ ಸಂದೇಶ ನೀಡಿದೆ ಎಂದು ಹೇಳಲಾಗಿದೆ.
ನನ್ನ ಕ್ಷೇತ್ರಕ್ಕೆ 25 ಕೋಟಿ ವಿಶೇಷ ಅನುದಾನ ಬಿಡುಗಡೆ ಆಗಿದ್ದರೂ, ಎರಡು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ರಾಜು ಕಾಗೆ ಇತ್ತೀಚೆಗೆ ಹೇಳಿದ್ದರು.
ಆಳಂದ ಶಾಸಕ ಬಿ.ಆರ್ ಪಾಟೀಲ ವಸತಿ ಇಲಾಖೆಯ ಭ್ರಷ್ಟಾಚಾರ ಬಗ್ಗೆ ಹೇಳಿಕೆಯಿತ್ತ ನಂತೆ ಬಿ.ಆರ್ ಪಾಟೀಲರಂತೆಯೇ ನನ್ನ ಸ್ಥಿತಿಯೂ ಇದೆ ಎಂದು ರಾಜು ಕಾಗೆ ಹೇಳಿದ್ದರು. ನನಗೆ ಸರ್ಕಾರದಿಂದ 25 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಆಗಿದೆ. 13 ಕೋಟಿ ರೂಪಾಯಿಯಲ್ಲಿ 72 ಸಮುದಾಯ ಭವನ, 12 ಕೋಟಿ ರೂಪಾಯಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಚಾಲನೆ ನೀಡಿ ಎರಡು ವರ್ಷ ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ವರ್ಕ್ ಆರ್ಡರ್ ಕೊಡದಿರುವುದಕ್ಕೆ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಎರಡ್ಮೂರು ದಿನಗಳಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಈ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದಿದ್ದರು.
ಆ ಬಳಿಕ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ ರಾಜು ಕಾಗೆ ಜೊತೆಗೆ ಪ್ರತ್ಯೇಕ ಸಭೆ ನಡೆಸಿ ಬಹಿರಂಗ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.