Menu

ಬೆಂಗಳೂರು ಕಾಲ್ತುಳಿತ ಪ್ರಕರಣ: ಆರ್ ಸಿಬಿಗೆ ಹೈಕೋರ್ಟ್ ನೋಟಿಸ್ ಜಾರಿ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನ ವಿಭಾಗೀಯ ಪೀಠ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.

ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠ ಇಂದು (ಜೂ.17) ನಡೆಸಿತು.

ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್​ಗೆ ಸಲ್ಲಿಕೆ ಮಾಡಿತು.

ಮುಚ್ಚಿದ ಲಕೋಟೆಯಲ್ಲಿ ಏಕೆ ವರದಿ ಸಲ್ಲಿಸುತ್ತಿದ್ದೀರಿ ಎಂಬ ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ಪರ ಅಡ್ವೋಕೇಟ್​ ಜನರಲ್​ ಶಶಿಕಿರಣ್‌ ಶೆಟ್ಟಿ, ತನಿಖೆ ಇನ್ನೂ ಬಾಕಿಯಿರುವುದರಿಂದ ಪೂರ್ವಾಗ್ರಹವಿರಬಾರದು, ಮೂರನೇ ವ್ಯಕ್ತಿಗಳ ವಿರುದ್ಧ ಅಭಿಪ್ರಾಯವೆಂದು ಭಾವಿಸಬಾರದು. ಹೀಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ದಾಖಲೆಗಳನ್ನು ಹಂಚಿಕೊಳ್ಳುವುದಕ್ಕೆ ಸರ್ಕಾರದ ಆಕ್ಷೇಪವಿಲ್ಲ. ಆದರೆ. ನ್ಯಾಯಾಂಗ ತನಿಖೆ ಬಾಕಿಯಿರುವುದರಿಂದ ವರದಿ ಬಹಿರಂಗ ಬೇಡ ಎಂದು ಹೇಳಿದರು.

ಪ್ರಕರಣದಲ್ಲಿ ಅಮೈಕಸ್ ಕ್ಯೂರಿ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಮುಚ್ಚಿದ ಲಗೋಟೆಯಲ್ಲಿ ಸರ್ಕಾರ ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸಲು ಕೆಲ ಅರ್ಜಿದಾರರು ಮನವಿ ಮಾಡಿದರು.

ಸರ್ಕಾರ ಪಾರದರ್ಶಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅನುಸರಿಸಬೇಕು. ಮಾಹಿತಿಯ ಹಕ್ಕನ್ನು ಸರ್ಕಾರ ಗೌರವಿಸಬೇಕು. ಸರ್ಕಾರ ಯಾವುದೇ ಮಾಹಿತಿಯನ್ನೂ ಮುಚ್ಚಿಡಬಾರದು. ಸರ್ಕಾರ ಸಂಪೂರ್ಣ ತಪ್ಪು ವರದಿ ನೀಡಿದರೂ ತಿಳಿಯುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ವರದಿಯಲ್ಲಿನ ಅಂಶ ಬಹಿರಂಗವಾಗಬೇಕು. ಇಲಿ, ಬೆಕ್ಕಿನ ಆಟ ಸರಿಯಲ್ಲವೆಂದು ಅರ್ಜಿದಾರರು ವಾದ ಮಾಡಿದರು.

ಬಳಿಕ ಹೈಕೋರ್ಟ್​ ಸರ್ಕಾರದ ವಾದ ಕೇಳಿದ ಬಳಿಕ ಮುಚ್ಚಿದ ಲಕೋಟೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ.

Related Posts

Leave a Reply

Your email address will not be published. Required fields are marked *