ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ವಿಚಾರಣೆಗೆ ಹಾಜರಾದರು. ಇದೇ ವೇಳೆ ದರ್ಶನ್ ಪರ ವಕೀಲರು ರೇಣುಕಾಸ್ವಾಮಿ ಪ್ರಕರಣದಿಂದ ದರ್ಶನ್ ಅವರನ್ನು ಕೈ ಬಿಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಗುರುವಾರ 64 ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನ ವಿರುದ್ಧ ಕೋರ್ಟ್‌ನಲ್ಲಿ ಮತ್ತೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಪದೇ ಪದೇ ಬೆನ್ನು ಮುಟ್ಟಿಕೊಂಡು ಜಡ್ಜ್ ಗೆ ನಟ ದರ್ಶನ್ ತಮಗೆ ಬೆನ್ನು ನೋವು ಇದೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೋರ್ಟ್ ಆದೇಶ ಇದ್ದರೂ ಜೈಲಿನಲ್ಲಿ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ, ವಾಕಿಂಗ್ ಮಾಡಲು ಸರಿಯಾದ ಸಮಯಾವಕಾಶ ಕೂಡಾ ನೀಡುತ್ತಿಲ್ಲ. ವಾಕಿಂಗ್ ಮಾಡಲು 25×3 ಅಡಿ ಜಾಗ ನೀಡಿದ್ದಾರೆ, ಈ ಜಾಗದಲ್ಲಿ ಸರಿಯಾಗಿ ಬಿಸಿಲು ಕೂಡ ಬರ್ತಾ ಇಲ್ಲ ಎಂದು ದೂರಿದ್ದಾರೆ.
ನ್ಯಾಯಾಲಯದ ಸೂಚನೆಯನ್ನು ಜೈಲು ಸಿಬ್ಬಂದಿಗೆ ಹೇಳಲು ಹೋದರೆ ಆರ್ಡರ್ ತೋರಿಸಿ ಎಂದು ಕೇಳ್ತಾರೆ. ಇದೇನು ಗೂಂಡಾ ರಾಜ್ಯವೇ? ಎಂದು ದರ್ಶನ ಪರ ವಕೀಲ ಪ್ರಶ್ನಿಸಿದರು.
ನನ್ನ ಪರ ಸುಳ್ಳು ಸಾಕ್ಷ್ಯ ಸಂಗ್ರಹ
ನಾನು ನಿರಪರಾದಿ, ಯಾವುದೇ ತಪ್ಪನ್ನು ಮಾಡಿಲ್ಲ, ನನ್ನನ್ನು ಪ್ರಕರಣದಿಂದ ಕೈ ಬಿಡಿ ಎಂದು ನಟ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಾನು ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಭಾಗಿಯಾಗಿಲ್ಲ. ನನ್ನ ವಿರುದ್ದ ಎಲ್ಲಾ ಸುಳ್ಳು ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗಿದೆ. ನನ್ನನ್ನು ಪ್ರಕರಣದಿಂದ ಕೈಬಿಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.