ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧ ಕುರಿತು ನೀತಿ ಚೌಕಟ್ಟು ರೂಪಿಸಲು ಒಂದು ತಿಂಗಳ ಸಮಯ ನೀಡಲಾಗಿದ್ದರೂ ಈವರೆಗೂ ಯಾವುದೇ ನಿಯಮಾವಳಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಬೈಕ್ ಟ್ಯಾಕ್ಸಿ ಮಾಲೀಕರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಬೈಕ್ ಟ್ಯಾಕ್ಸಿ ಬಗ್ಗೆ ನಿಮ್ಮ ವಾದ ಮಂಡಿಸಿ ಬಳಿಕ ನಿರ್ಬಂಧ ತೆರವುಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿ ಕಿರಣ ಶೆಟ್ಟಿ ಅವರು, ಬೈಕ್ ಟ್ಯಾಕ್ಸಿಗೆ ಪ್ರಯಾಣಿಕರನ್ನು ಕರೆದೊಯ್ಯಲು
ಸರ್ಕಾರದಿಂದ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ. ಬೈಕ್‌ಗಳನ್ನು ಕೇವಲ ಡೆಲಿವರಿ ಸೇವೆಗಳಿಗೆ ಮಾತ್ರ ಬಳಸಲು ಅವಕಾಶವಿದೆ. ಆದರೆ, ಕೆಲವು ಬೈಕ್ ಟ್ಯಾಕ್ಸಿ ಸೇವೆಗಳು ಅನುಮತಿ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದರಿಂದ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರದ ವಾದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ರೈಡರ್‌ಗಳಿಗೆ ನೀತಿ ರೂಪಿಸಲು ಒಂದು ತಿಂಗಳ ಕಾಲಾವಕಾಶ ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ; ಬೈಕ್ ಟ್ಯಾಕ್ಸಿ ವಿಚಾರ ಬಿಟ್ಟು ಕೇವಲ ಬೈಕ್‌ಗಳನ್ನು ಡೆಲಿವರಿಗೆ ಬಳಸುವ ಕಾರ್ಮಿಕರ ಬಗ್ಗೆ ಹೇಳುತ್ತಿದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಹಿಂದಿನ ವಿಚಾರಣೆಯಲ್ಲಿ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ನಿಯಮಗಳ ರೂಪಿಸುವುದಕ್ಕೆ ಸಂಬಂಧಿಸಿದಂತೆ ಮುಂದಿನ ಒಂದು ತಿಂಗಳಲ್ಲಿ ತನ್ನ ನಿಲುವು ತಿಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಗಡುವು ನೀಡಿತ್ತು. ಜೀವನೋಪಾಯಕ್ಕಾಗಿ ಹಲವು ಮಂದಿ ಬೈಕ್-ಟ್ಯಾಕ್ಸಿ ಚಾಲನೆಯನ್ನು ವೃತ್ತಿಯನ್ನು ಅವಲಂಬಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸರ್ಕಾರ ನಿಯಮಗಳನ್ನು ರೂಪಿಸಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು.
ಬೆಂಗಳೂರು ವ್ಯಾಪ್ತಿಯಲ್ಲೇ 1.20 ಲಕ್ಷ ಬೈಕ್ ಗಳು ಬೈಕ್ ಟ್ಯಾಕ್ಸಿ ಸೇವೆಗೆ ನೋಂದಣಿ ಮಾಡಿಕೊಂಡಿವೆ. ಇನ್ನು ರಾಜ್ಯದಾದ್ಯಂತ 6 ಲಕ್ಷಕ್ಕೂ ಹೆಚ್ಚು ಸವಾರರು ಬೈಕ್ ಟ್ಯಾಕ್ಸಿ ನಂಬಿಕೊಂಡು ತಮ್ಮ ಜೀವನ ಸಾಗಿಸುತ್ತಿರುವುದು ಇಲ್ಲಿ ಗಮನಾರ್ಹ.