ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡ ಪತಿಯೊಬ್ಬ ತನ್ನ ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಭಯಾನಕ ಕೃತ್ಯ ನಡೆದಿದೆ.
ಪತಿ-ಪತ್ನಿಯ ಜಗಳದಿಂದ ಅಮಾಯಕ ಮುದ್ದು ಮಕ್ಕಳ ಪ್ರಾಣ ಬಲಿಯಾಗಿದೆ. ಮಲಗಿದ್ದ ಮಕ್ಕಳ ಮೇಲೆ ತಂದೆಯಾದವ ರಾಕ್ಷಸನಂತೆ ಕ್ರೌರ್ಯ ಎಸಗಿದ್ದಾನೆ.ಈ ರಾಕ್ಷಸ ಕೃತ್ಯಕ್ಕೆ 5 ವರ್ಷದ ಮಗಳು ಸಾನ್ವಿ ಮತ್ತು 3 ವರ್ಷದ ಮಗ ಭರತ್ ಬಲಿಯಾಗಿ ಹೋಗಿದ್ದಾರೆ.
ಗಂಡ ಹೆಂಡತಿ ನಡುವೆ ಜಗಳ ಆಗಿ ಪತ್ನಿ ಮಕ್ಕಳೊಂದಿಗೆ ತವರು ತವರು ಮನೆಗೆ ಹೋಗಿದ್ದಳು. ಆಕೆಯ ಮೇಲೆ ಅನುಮಾನವುಂಟಾಗಿ ಪತಿ ಆಕೆಯನ್ನು ಕೆಲವು ದಿನಗಳ ಹಿಂದೆ ವಾಪಾಸ್ ಕರೆತಂದಿದ್ದ. ಮೊನ್ನೆಯಷ್ಟೇ ಮಗಳು ಸಾನ್ವಿಯನ್ನು (5) ಕರೆದುಕೊಂಡು ಬಂದಿದ್ದ. ಮರುದಿನ ಬೆಳಗ್ಗೆ ಪತ್ನಿ ಬಹಿರ್ದೆಸೆಗೆ ಹೋಗಿದ್ದಾಗ ಮಲಗಿದ್ದ ಮಕ್ಕಳ ಮೇಲೆ ಶರಣಪ್ಪ ಕೊಡಲಿಯಿಂದ ಪ್ರಹಾರ ಮಾಡಿದ್ದಾನೆ. ಮತ್ತೊಬ್ಬ ಮಗನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಕ್ಕಳನ್ನು ಕೊಂದ ನಂತರ ಕೊಡಲಿ ಸಮೇತ ಆರೋಪಿ ಪರಾರಿಯಾಗಿದ್ದಾನೆ. ಕೊಲೆಗಾರ ತಂದೆ ಶರಣಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಭಯ ಸೃಷ್ಟಿಸಿದ್ದು, ಎಲ್ಲರಲ್ಲೂ ಆತಂಕವನ್ನು ಮೂಡಿಸಿದೆ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸ್ಥಳಕ್ಕೆ ಡಿವೈಎಸ್‌ಪಿ ಸುರೇಶ್ ನಾಯಕ್ ಮತ್ತು ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.