ಕೋಲಾರದ ಮಾಲೂರು ತಾಲೂಕು ಬ್ಯಾಟರಾಯನಹಳ್ಳಿ ಗ್ರಾಮದಲ್ಲಿ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಶೆಟ್ಟಹಳ್ಳಿ ಗ್ರಾಮದ ಸತೀಶ್ (18) ಹಾಗೂ ಅಪ್ರಾಪ್ತ ವಯಸ್ಕ ಬಾಲಕಿ ಆತ್ಮಹತ್ಯೆ ಮಾಡಿಕೊಂಡವರು.
ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದು ಬ್ಯಾಟರಾಯನಹಳ್ಳಿ ಗ್ರಾಮದ ಬಳಿ ಬೈಕ್ ನಿಲ್ಲಿಸಿ ಕೋಲಾರದಿಂದ ಬೆಂಗಳೂರಿಗೆ ತೆರಳುವ ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿದ್ದಾರೆ.
ರೈಲಿನಡಿ ಸಿಲುಕಿದ ದೇಹಗಳು ಛಿದ್ರಗೊಂಡಿವೆ, ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವಿಚಿತ್ರ ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ಬೆಳಗಾವಿ ನಗರದ ಕಪಿಲೇಶ್ವರ ರಸ್ತೆಯ ನಿವಾಸಿಯಾಗಿಉವ ಯುವಕನೊಬ್ಬ ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದಾಂತ ಪೂಜಾರಿ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಾಂತ ಪೂಜಾರಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಖಡೇಬಜಾರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿದ್ದಾಂತ ಪೂಜಾರಿ ಮೊಬೈಲ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಆತ ಅದರಲ್ಲಿ ಸಾವಿಗೆ ಹಲವಾರು ಕಾರಣ ಬರೆದಿದ್ದಾನೆ. ಮಗನ ಸಾವಿಗೆ ಕಾರಣ ಸುಪ್ರಸಿದ್ದ ಕಪಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಎಂದು ತಂದೆ ಆರೋಪ ಮಾಡಿದ್ದಾರೆ.
ತಾನು ಮೇಲೆ ಹೋಗುತ್ತಿದ್ದೇನೆ. ಅಲ್ಲಿ ದೇವರು ಭೇಟಿಯಾದರೆ ನನಗೆ ಕಿರುಕುಳ ಕೊಟ್ಟವರನ್ನ ದೇವರ ಕಡೆಯಿಂದ ಹೊಡೆಸುತ್ತೇನೆ. ತನ್ನ ತಿಥಿಗೆ ಅಜ್ಜಿಗೆ ಮಾಡಿದಂತೆ ಮಟನ್ ಮಾಡಬೇಡಿ ಬೇರೆ ಏನಾದರೂ ಮಾಡಿ ಎಂದು ಬರೆದಿದ್ದಾನೆ. ಮೂರು ವರ್ಷದ ಹಿಂದೆ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡ್ತಿದ್ದಾಗ ಕೆಲವರು ತನ್ನ ಮೇಲೆ ಸುಳ್ಳು ರೇಪ್ ಕೇಸ್ ಹಾಕಿದ್ದರಿಂದ ಜೀವನವೇ ಹಾಳಾಗಿದೆ ಎಂದೂ ಬರೆದಿದ್ದಾನೆ.
ಗಣಪತಿ ಹಬ್ಬಕ್ಕೂ ಮೊದಲೇ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಹಬ್ಬ ಮಾಡಲೆಂದು ಮುಂದೂಡಿದ್ದೆ. ಯಾರು ಕೂಡ ಅಳಬೇಡಿ ಆತ್ಮಕ್ಕೆ ನೋವಾಗುತ್ತೆ. ಇದೆಲ್ಲಾ ಹೇಳಲು ನನಗೆ ಆಗಲ್ಲ , ಏಕೆಂದರೆ ನಾನೀಗ ಸತ್ತಿದ್ದೇನೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದು, ಆತ್ಮಹತ್ಯೆಗೆ ಬೇರೆ ಏನಾದರೂ ಕಾರಣ ಇರಬಹುದೇ ಎಂದು ಪರಿಶೀಲಿಸುತ್ತಿದ್ದಾರೆ.