ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಸಂಘರ್ಷಕ್ಕೆ 4 ಜನ ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿರುವುದು ವರದಿಯಾಗಿದೆ.
ಲಡಾಖ್ ಅಪೆಕ್ಸ್ ಬಾಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಹಲವು ವಾಹನಗಳು ಸುಟ್ಟಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವುದರಿಂದ ಪ್ರತಿಭಟನೆ ತೀವ್ರಗೊಂಡಿದೆ ಎಂದು ಎಲ್‌ಎಬಿ ಸಂಘಟಕರು ತಿಳಿಸಿದ್ದಾರೆ. ಹಿಂಸಾಚಾರ ತೀವ್ರಗೊಂಡ ಬಳಿಕ ಕೇಂದ್ರ ಆಡಳಿತವು ಕರ್ಫ್ಯೂ ಹೇರಿ ಲೇಹ್‌ನಲ್ಲಿ ಪ್ರತಿಭಟನೆ ನಿಷೇಧಿಸಿದೆ.
ಸೆ.10ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 15 ಜನರಲ್ಲಿ ಇಬ್ಬರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಸ್ಥಳಾಂತರಿಸಿದ ಬಳಿಕ ಎಲ್‌ಎಬಿ ಯುವ ಘಟಕವು ಪ್ರತಿಭಟನೆಗೆ ಕರೆ ನೀಡಿತ್ತು. ಹಿಂಸಾಚಾರ ಹಿನ್ನೆಲೆಯಲ್ಲಿ ಹೋರಾಟಗಾರ ಸೋನಮ್ ವಾಂಗ್ ಚುಕ್ ಉಪವಾಸ ಅಂತ್ಯಗೊಳಿಸಿದ್ದಾರೆ. ಲಡಾಖ್‌ಗೆ ರಾಜ್ಯದ ಮಾನ್ಯತೆ ನೀಡಿ ಆರನೇ ಪರಿಚ್ಛೇದದಡಿಯಲ್ಲಿ ಸೇರಿಸುವ ಬೇಡಿಕೆ ಈಡೇರಿದಾಗ ಹೋರಾಟವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಶಾಂತಿಗೆ ಆಗ್ರಹಿಸಿರುವ ಅವರು, ಯುವಕರು ನಿರುದ್ಯೋಗ ಸಮಸ್ಯೆಗೆ ಬೇಸತ್ತು ಹಿಂಸೆಗಿಳಿದಿರಬಹುದು. ಆದರೆ ಹಿಂಸೆಯಿಂದ ಹೋರಾಟ ಹಳಿ ತಪ್ಪಲಿದೆ ಎಂದು ಎಚ್ಚರಿಸಿದ್ದಾರೆ.
ಲಡಾಖ್ ಅನ್ನು ರಾಜ್ಯವಾಗಿಸುವ ಸಂಬಂಧ ಅ.6ರಂದು ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿರುವ ಸಂದರ್ಭದಲ್ಲೇ ಪ್ರತಿಭಟನೆ ಭುಗಿಲೆದ್ದಿದೆ. ಇದೇ ಮೊದಲ ಬಾರಿ ಈ ಚಳವಳಿ ಹಿಂಸಾಚಾರಕ್ಕೆ ತಿರುಗಿದೆ. 370ನೇ ವಿಧಿ ರದ್ದತಿಯ ಬಳಿಕ 2019ರ ಆಗಸ್ಟ್‌ನಲ್ಲಿ ಲಡಾಖ್‌ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿತ್ತು. ತಮಗೂ ಕಾಶ್ಮೀರದ ರೀತಿಯಲ್ಲೇ ಪ್ರತ್ಯೇಕ ರಾಜ್ಯದ ಸ್ಥಾನ ನೀಡಬೇಕೆಂದು ಸ್ಥಳೀಯ ಯುವಸಮುದಾಯದ ಹೋರಾಟ, ಪ್ರತಿಭಟನೆ ತೀವ್ರಗೊಳ್ಳುವ ಹಾದಿಯಲ್ಲಿದೆ.