ಭಾರತದ ಜೊತೆಗೆ ಇಂಧನ, ವ್ಯಾಪಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧ ವರ್ಧನೆ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದೊಗೆ ಚರ್ಚಿಸಿದ್ದೇನೆ. ಆದರೆ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿ ನಿರ್ಧಾರವನ್ನು ಮರುಪರಿಶೀಲಿಸಬೇಕು. ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇನೆ, ನಾನು ಭಾರತದ ದೊಡ್ಡ ಅಭಿಮಾನಿ ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಹೇಳಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿದ ಕ್ರಿಸ್ ರೈಟ್ , ನಾವು ಭಾರತದ ಜೊತೆಗೆ ಉಜ್ವಲ ಭವಿಷ್ಯವನ್ನು ಎದುರು ನೋಡುತ್ತಿದ್ದೇವೆ. ಆದರೆ ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಜೊತೆಗಿನ ಹೊಂದಾಣಿಕೆಯನ್ನು ಕೈಬಿಡಬೇಕು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಶಮನವನ್ನು ಮಾತ್ರ ಅಪೇಕ್ಷಿಸುತ್ತಿದ್ದಾರೆ. ಯುರೋಪ್ ರಾಷ್ಟ್ರಗಳು ಈಗಾಗಲೇ ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ರಷ್ಯಾದ ಮೇಲೆ ಒತ್ತಡ ಹೇರಲು ಎಲ್ಲಾ ಮಾರ್ಗಗಳನ್ನ ಹುಡುಕುತ್ತಿವೆ. ಭಾರತ ತೈಲ ಖರೀದಿ ನಿಲ್ಲಿಸಿದರೆ ಸಂಘರ್ಷ ನಿಲ್ಲಿಸುವಲ್ಲಿ ಹೆಚ್ಚು ನೆರವಾಗುತ್ತದೆ ಎಂದರು.
ಭಾರತದ ಜೊತೆಗೆ, ಇಂಧನ ಮತ್ತು ಮುಕ್ತ ವ್ಯಾಪಾರ ಸಹಕಾರದ ವಿಷಯದಲ್ಲಿ ನಾನು ಬದ್ಧನಾಗಿದ್ದೇನೆ. ಭಾರತವು ನಿರಂತರವಾಗಿ ರಷ್ಯಾದಿಂದ ತೈಲ ಖರೀದಿಸುತ್ತಿರುವ ಬಗ್ಗೆ ಮಾತನಾಡಿದ ಕ್ರಿಸ್ ರೈಟ್, ಭಾರತವು ರಷ್ಯಾದ ತೈಲ ಖರೀದಿ ಮಾಡುವ ಅಗತ್ಯವಿಲ್ಲ. ಭಾರತ ರಿಯಾಯಿತಿ ದರದಲ್ಲಿ ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಪ್ರತಿವಾರ ಸಾವಿರಾರು ಜನರನ್ನು ಕೊಲ್ಲುವ ವ್ಯಕ್ತಿಗೆ ಹಣ ನೀಡಿದಂತಾಗುತ್ತಿದೆ. ಅಮೆರಿಕವು ಭಾರತವನ್ನು ಶಿಕ್ಷಿಸಲು ಬಯಸುವುದಿಲ್ಲ, ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ. ಹಾಗಾಗಿ ರಷ್ಯಾದಿಂದ ಭಾರತವು ತೈಲ ಖರೀದಿ ನಿಲ್ಲಿಸಬೇಕು. ಅಮೆರಿಕ ಬಳಿ ಮಾರಾಟ ಮಾಡಲು ತೈಲ ಇದೆ. ಭಾರತ ನಮ್ಮ ಸಂಬಂಧವನ್ನು ಬಯಸಿದರೆ ರಷ್ಯಾದ ತೈಲ ಖರೀದಿ ನಿಲ್ಲಿಸಬೇಕು ಎಂದಿದ್ದಾರೆ.
ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಲು ಪ್ರಯತ್ನಿಸಿದ ನಂತರ, ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಉದ್ವಿಗ್ನತೆ ಹೆಚ್ಚಾಗಿದೆ. ಟ್ರಂಪ್ ಪ್ರಕಾರ, ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುತ್ತಿರುವುದು ಉಕ್ರೇನ್ ಯುದ್ಧಕ್ಕೆ ರಷ್ಯಾವನ್ನು ಬೆಂಬಲಿಸಿದಂತಾಗುತ್ತದೆ. ರಷ್ಯಾದ ತೈಲ ಖರೀದಿಯಿಂದ ರಷ್ಯಾದ ಆರ್ಥಿಕತೆಯು ಬಲಗೊಳ್ಳುತ್ತದೆ, ಇದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದೆ. ಟ್ರಂಪ್ ಅವರ ಸುಂಕದ ಬೆದರಿಕೆಗಳ ನಡುವೆಯೂ ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದೆ.
ಭಾರತದ ಮೇಲೆ ಇದುವರೆಗೆ 50% ಸುಂಕವನ್ನು ವಿಧಿಸಿರುವ ಟ್ರಂಪ್ ಸುಂಕಗಳಲ್ಲಿ 25% ಪರಸ್ಪರ ಸುಂಕವಾದ್ರೆ, ಇನ್ನು 25% ರಷ್ಯಾದಿಂದ ತೈಲ ಖರೀದಿಸುತ್ತಿರುವುದರ ಮೇಲಿನ ದಂಡವಾಗಿದೆ .ರಷ್ಯಾದಿಂದ ತೈಲ ಖರೀದಿಯು ನಮ್ಮ ಆರ್ಥಿಕ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ನಾವು ಖಂಡಿತವಾಗಿಯೂ ಅದನ್ನು ಮುಂದುವರಿಸುತ್ತೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತ ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಹೊಂದಿದೆ. ನಮ್ಮ ರಾಷ್ಟ್ರದ ಆರ್ಥಿಕ ಹಿತಾಸಕ್ತಿಗಳಿಗೆ ಬೇಕಾದಂತೆ ಕೆಲಸ ಮಾಡುತ್ತೇವೆ. ರಷ್ಯಾದಿಂದ ತೈಲ ಖರೀದಿ ನಮ್ಮ ಆರ್ಥಿಕ ಯೋಜನೆಯ ಭಾಗವಾಗಿದ್ದು, ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದ್ದಾರೆ.
ರಷ್ಯಾದೊಂದಿಗಿನ ತನ್ನ ಕಂಪನಿಗಳ ಸಾಮಾನ್ಯ ವ್ಯಾಪಾರಕ್ಕೆ ಅಡ್ಡಿಯುಂಟಾದರೆ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಚೀನಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೋ ಜಿಯಾಕುನ್ ಹೇಳಿದ್ದಾರೆ. ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಅನೇಕ ದೇಶಗಳು ರಷ್ಯಾದ ಜೊತೆಗೆ ವ್ಯಾಪಾರದಲ್ಲಿ ತೊಡಗಿವೆ. ಚೀನಾ ಮತ್ತು ರಷ್ಯಾದ ಕಂಪನಿಗಳು ವಿಶ್ವ ವ್ಯಾಪಾರ ಸಂಘಟನೆಯ ನಿಯಮ ಮತ್ತು ಮಾರುಕಟ್ಟೆಯ ತತ್ವಗಳ ಜೊತೆಗೆ ಸಾಮಾನ್ಯ ವಿನಿಯಮ ಮತ್ತು ಸಹಕಾರ ನಡೆಸಿವೆ ಎಂದಿದ್ದಾರೆ.