ನವದೆಹಲಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಮತ್ತೆ ಹಾಂಕಾಂಗ್‌ಗೆ ತಿರುಗಿಸಲಾಗಿದೆ. ತಾಂತ್ರಿಕ ದೋಷದಿಂದಾಗಿ ಈ ಕ್ರಮ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಬೋಯಿಂಗ್ 787-8 ಡ್ರೀಮ್‌ಲೈನರ್ AI 315 ವಿಮಾನವು ಹಾಂಕಾಂಗ್‌ನಿಂದ ದೆಹಲಿಗೆ ಹೊರಟಿತ್ತು. ವಿಮಾನ ಟ್ರ್ಯಾಕಿಂಗ್ ಸೈಟ್ ಫ್ಲೈಟ್ ರಾಡಾರ್ 24 ಪ್ರಕಾರ, ಏರ್ ಇಂಡಿಯಾ ವಿಮಾನವು ಮಧ್ಯಾಹ್ನ 12.20ರ ಹೊತ್ತಿಗೆ ದೆಹಲಿಯಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ವಿಮಾನದಲ್ಲಿ ಕೆಲವು ತಾಂತ್ರಿಕ ದೋಷಗಳಿವೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೈಲಟ್ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಹಾಂಕಾಂಗ್ ಕಡೆಗೆ ತಿರುಗಿಸಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಸಿ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ಅಹ್ಮದಾಬಾದ್‌ನಲ್ಲಿ ಗುರುವಾರ ಏರ್ ಇಂಡಿಯಾದ ವಿಮಾನ ಪತನದ ಬಳಿಕ ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾದ ಬೋಯಿಂಗ್ 787-8 ಮತ್ತು 787-9 ಪ್ಲೈಟ್ ಗಳ ಸುರಕ್ಷತಾ ತಪಾಸಣೆಗೆ ಆದೇಶಿಸಿದೆ. ವಿಮಾನಯಾನ ಸಂಸ್ಥೆಯು 33 ಡ್ರೀಮ್‌ಲೈನರ್ ವಿಮಾನಗಳಲ್ಲಿ ಒಂಬತ್ತು ವಿಮಾನಗಳ ತಪಾಸಣೆ ಪೂರ್ಣಗೊಂಡಿದ್ದು, ಉಳಿದ 24 ವಿಮಾನಗಳನ್ನು ನಿಗದಿತ ಸಮಯದೊಳಗೆ ಪರಿಶೀಲಿಸಲಾಗುವುದು ಎಂದು ಹೇಳಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ 250 ಹಜ್ ಯಾತ್ರಿಕರಿದ್ದ ಸೌದಿಯ ಏರ್‌ಲೈನ್ಸ್‌ನ ವಿಮಾನ ಲಕ್ನೋ ವಿಮಾನ ನಿಲ್ದಾಣದಲ್ಲಿ ಇಂದು ತುರ್ತು ಭೂಸ್ಪರ್ಶ ಮಾಡಿದ್ದು, ಸಂಭಾವ್ಯ ಅಪಾಯ ತಪ್ಪಿದೆ.