ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ (Caste Survey) ಕುರಿತ ವಿಚಾರಣೆ ಹೈಕೋರ್ಟ್‌ನಲ್ಲಿ ಎರಡನೇ ದಿನವೂ ಜೋರಾಗಿ ನಡೆಯಿತು. ವಿಚಾರಣೆಯ ವೇಳೆ ನ್ಯಾಯಾಲಯವು ಹಲವು ಪ್ರಶ್ನೆಗಳನ್ನು ಎತ್ತಿ, ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕೋರ್ಟ್ ಗಮನ ಸೆಳೆದ ಪ್ರಮುಖ ವಿಷಯವೆಂದರೆ, ಸಮೀಕ್ಷೆಗೆ ಆಧಾರ್ ನಂಬರ್‌ನ್ನು ಕಡ್ಡಾಯಗೊಳಿಸಿರುವುದು. ಆಧಾರ್ ಮಾಹಿತಿಯ ಮೂಲಕ ಈಗಾಗಲೇ ಅನೇಕ ಸೈಬರ್ ಅಪರಾಧಗಳು ನಡೆಯುತ್ತಿರುವುದು, ಖಾಸಗಿತನದ ಹಕ್ಕು ಹಾನಿಯಾಗುವ ಬಗ್ಗೆ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಜೊತೆಗೆ, “ಗಣತಿಗೆ ತಡೆ ನೀಡಿದರೆ ಸರ್ಕಾರಕ್ಕೆ 350 ಕೋಟಿ ರೂ. ಹಣ ಉಳಿಯುತ್ತದೆಯೇ?” ಎಂದು ಪ್ರಶ್ನೆ ಮಾಡಿತು.
ರಾಜ್ಯದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, “ಇದು ಗಣತಿ ಅಲ್ಲ, ಹಿಂದುಳಿದ ವರ್ಗಗಳ ಗುರುತಿಗೆ ಮಾತ್ರ ಮಾಡಲಾಗುತ್ತಿರುವ ಸರ್ವೇ. ಸಂವಿಧಾನವು ರಾಜ್ಯಗಳಿಗೆ ಇಂತಹ ಸರ್ವೇ ಮಾಡಲು ಹಕ್ಕು ನೀಡಿದೆ. ಆದ್ದರಿಂದ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ” ಎಂದು ವಾದಿಸಿದರು.
ಆದರೆ, ಕೇಂದ್ರದ ಪರವಾಗಿ ಎಎಸ್‌ಜಿ ಅರವಿಂದ್ ಕಾಮತ್ ಪ್ರತಿಪಾದನೆ ಮಾಡಿದ್ದು, “ಗಣತಿ ನಡೆಸುವ ಅಧಿಕಾರವು ಗಣತಿ ಕಾಯ್ದೆಯ ಪ್ರಕಾರ ಕೇಂದ್ರ ಸರ್ಕಾರಕ್ಕಷ್ಟೇ ಇದೆ. ರಾಜ್ಯ ಸರ್ಕಾರ ಇದನ್ನು ದುರುಪಯೋಗ ಮಾಡಬಾರದು” ಎಂದು ಹೇಳಿದರು.
ಇದರ ನಡುವೆ, ಹಿಂದುಳಿದ ವರ್ಗಗಳ ಆಯೋಗದ ಪರ ಪ್ರೊ. ರವಿವರ್ಮ ಕುಮಾರ್ ತಮ್ಮ ವಾದದಲ್ಲಿ, “ಯಾವುದೇ ಹೊಸ ಜಾತಿಯನ್ನು ನಾವು ಸೃಷ್ಟಿಸಿಲ್ಲ. ಹಳೆಯ ಮಾಹಿತಿಯ ಆಧಾರದಲ್ಲಿ 1,561 ಜಾತಿಗಳನ್ನು ಗುರುತಿಸಲಾಗಿದೆ. ಕೆಲವು ಮನವಿಗಳ ಆಧಾರದ ಮೇಲೆ ತಿದ್ದುಪಡಿ ಮಾತ್ರ ನಡೆದಿದೆ. ಈಗಾಗಲೇ 2 ಕೋಟಿ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಆಧಾರ್ ನಂಬರ್ ಕೇಳುವುದು ಗುರುತಿಗಾಗಿ ಮಾತ್ರ, ಉತ್ತರ ನೀಡುವುದು ಕಡ್ಡಾಯವಲ್ಲ. ಸ್ಟಿಕ್ಕರ್ ಅಂಟಿಸುವುದು ಬಲವಂತವಿಲ್ಲ” ಎಂದು ಸ್ಪಷ್ಟನೆ ನೀಡಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.