ಧರ್ಮಸ್ಥಳ ಬುರುಡೆ ಪ್ರಕರಣದ ಮುಖ್ಯ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಗೆ ಗಡೀಪಾರು ಆದೇಶ ಹೊರಡಿಸಿದ ಬಳಿಕ, ಎಸ್ಐಟಿ ಅಧಿಕಾರಿಗಳು ಅವರ ಕುಟುಂಬದತ್ತ ತನಿಖೆಯ ಕಣ್ಣು ಹರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಸ್ಐಟಿ ತಂಡ ದಿಢೀರ್ ತಿಮರೋಡಿ ನಿವಾಸಕ್ಕೆ ಭೇಟಿ ನೀಡಿ ಪತ್ನಿಯ ಹೇಳಿಕೆ ದಾಖಲಿಸಿಕೊಂಡಿದೆ. ಆದರೆ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗದೇ, ತನಿಖಾಧಿಕಾರಿಗಳು ಪತ್ನಿಯ ಬ್ಯಾಂಕ್ ಖಾತೆ ವಿವರಗಳನ್ನೂ ಪರಿಶೀಲಿಸಿದ್ದು, ಅಲ್ಲಿ ಕಂಡುಬಂದ ಭಾರಿ ಹಣದ ವಹಿವಾಟು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಗಡೀಪಾರು ಆದೇಶದಿಂದಾಗಿ ತಿಮರೋಡಿ ತಾತ್ಕಾಲಿಕವಾಗಿ ತನಿಖೆಯಿಂದ ದೂರವಾಗಿದ್ದರೂ, ಅವರ ಪತ್ನಿಯ ಖಾತೆಯ ಚಲನವಲನದಿಂದಾಗಿ ಪ್ರಕರಣದ ಆರ್ಥಿಕ ಅಂಶ ಹೊರಬಂದಿದೆ. ಈ ಹಣದ ಮೂಲ ಏನು? ತಿಮರೋಡಿಗೆ ಸಂಬಂಧಿತ ವ್ಯವಹಾರವೇ? ಅಥವಾ ಬೇರೆ ಮೂಲಗಳ ಸಂಪರ್ಕ ಇದೆಯೇ? ಎಂಬ ಪ್ರಶ್ನೆಗಳುಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ತನಿಖಾಧಿಕಾರಿಗಳ ಪ್ರಕಾರ, ಕುಟುಂಬದ ಹಣಕಾಸು ದಾಖಲೆಗಳು ಬಹುಪಾಲು ರಹಸ್ಯ ಬಯಲಾಗುವ ದಾರಿಯಾಗಿದೆ. ಪತ್ನಿಯ ಖಾತೆ ವಿವರಗಳ ಮೂಲಕ ತಿಮರೋಡಿಗೆ ಸಂಬಂಧಿಸಿದ ಆರ್ಥಿಕ ಜಾಲವನ್ನು ಪತ್ತೆಹಚ್ಚುವ ಸಾಧ್ಯತೆ ಹೆಚ್ಚಿದೆ. ಇದರ ಬೆನ್ನಲ್ಲೇ ತನಿಖೆ ಇನ್ನಷ್ಟು ಆಳಕ್ಕೆ ಇಳಿಯುವ ನಿರೀಕ್ಷೆ ಇದೆ. ಈಗ ತನಿಖೆಯ ತೂಕ ಪತ್ನಿಯ ಬ್ಯಾಂಕ್ ಖಾತೆಯತ್ತ ತಿರುಗಿದ್ದು, ಮುಂದಿನ ದಿನಗಳಲ್ಲಿ ಹೊರಬರುವ ಆರ್ಥಿಕ ಸುಳಿವುಗಳು ಪ್ರಕರಣದ ನಿಜವಾದ ಚಿತ್ರವನ್ನು ಬೆಳಕಿಗೆ ತರುವ ನಿರೀಕ್ಷೆಯಿದೆ.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ 1 ವರ್ಷದ ಅವಧಿಗೆ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲು ಆದೇಶಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಸುಮಾರು 32 ಪ್ರಕರಣಗಳು ದಾಖಲಾಗಿವೆ. ಅಶಾಂತಿ ಸೃಷ್ಟಿ ಹಾಗೂ ಸಮಾಜದಲ್ಲಿ ಅಸ್ಥಿರತೆ ಉಂಟುಮಾಡುವ ಚಟುವಟಿಕೆ ಹೀಗೆ ವಿವಿಧ ಕಾನೂನು ಉಲ್ಲಂಘನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.