Wednesday, September 24, 2025
Menu

ಕನ್ನಡದ ಖ್ಯಾತ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ಇನ್ನಿಲ್ಲ

ಕನ್ನಡದ ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌ ಎಲ್‌ ಭೈರಪ್ಪ ( 94) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಭೈರಪ್ಪ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಕನ್ನಡದ ಈ ಮೇರು ಸಾಹಿತಿಯನ್ನು ಗೌರವಿಸಿದೆ. ಕೇಂದ್ರ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದರು. ಭೈರಪ್ಪನರು 1931ರ ಆಗಸ್ಟ್ 20ರಂದು ಚನ್ನರಾಯಪಟ್ಟಣದ ಬಳಿಯ ಸಂತೆಶಿವರ ಎಂಬ ಗ್ರಾಮದಲ್ಲಿ ಹುಟ್ಟಿದರು. ಮೈಸೂರಿನ ಶಾರದ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ಮೇಲೆ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ 1957ರಲ್ಲಿ ಬಿ.ಎ. ಮುಗಿಸಿದರು. 1958ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯಲ್ಲಿ ಚಿನ್ನದ ಪದಕ ಗಳಿಸಿದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಿಂದ ‘ಸತ್ಯ ಮತ್ತು ಸೌಂದರ್ಯ’ ಎಂಬ ಇಂಗ್ಲಿಷಿನಲ್ಲಿ ರಚಿಸಿದ ಪ್ರಬಂಧಕ್ಕೆ ಡಾಕ್ಟರೇಟ್‌ ಪಡೆದರು.

ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ, 1960ರಿಂದ 1966ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಭೈರಪ್ಪ ಸೇವೆ ಸಲ್ಲಿಸಿದರು. 1967ರಿಂದ 1971ರ ವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಉಪಪ್ರಾಧ್ಯಾಪಕರಾಗಿದ್ದರು. ನಂತರ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತತ್ವಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರದ ಪ್ರಾಧ್ಯಾಪಕರಾಗಿ 1991ರಲ್ಲಿ ನಿವೃತ್ತರಾದರು.

ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ನಿರಾಕರಣ, ಗ್ರಹಣ, ದಾಟು, ಅನ್ವೇಷಣ, ಪರ್ವ, ನೆಲೆ, ಸಾಕ್ಷಿ, ಅಂಚು, ತಂತು, ಸಾರ್ಥ, ಮಂದ್ರ, ಆವರಣ, ಕವಲು, ಯಾನ, ಉತ್ತರಕಾಂಡ ಭೈರಪ್ಪನವರ ಪ್ರಕಟಿತ ಕಾದಂಬರಿಗಳು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ನಾಯಿನೆರಳು, ಮತದಾನ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿವೆ. ಗೃಹಭಂಗ ದೂರದರ್ಶನದಲ್ಲಿ ಧಾರಾವಾಹಿ ಯಾಗಿ ಪ್ರಸಾರ ಆಗಿತ್ತು.

Related Posts

Leave a Reply

Your email address will not be published. Required fields are marked *