ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆ ದಿನೇದಿನೇ ಹೆಚ್ಚುತ್ತಿದ್ದರೂ ಅವುಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ ತೋರಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ, ಬಿಜೆಪಿ ನಗರದೆಲ್ಲೆಡೆ ರಸ್ತೆ ತಡೆ ಪ್ರತಿಭಟನೆ ನಡೆಸಿತು.
ಸ್ಥಳೀಯ ನಾಯಕರ ನೇತೃತ್ವದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ರಸ್ತೆ ರೋಕೋ (ರಸ್ತೆ ತಡೆ) ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿಯ ಕಾಮಾಂಕ್ಯ ಲೇಔಟ್ ಬಳಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕ ರವಿಸುಬ್ರಹ್ಮಣ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರುಗಳು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ, ಬೆಂಗಳೂರಿನ ಗುಂಡಿಗಳ ಬಗ್ಗೆ ಪ್ರತ್ಯಕ್ಷ ವರದಿ ಮಾಡಿದ ಆರ್. ಅಶೋಕ್, ತಾವೇ ಸನಿಕೆ ಹಿಡಿದು ಸಿಮೇಂಟ್ ಹಾಕಿ ಗುಂಡಿಯನ್ನು ಮುಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರಾಜ್ಯದಲ್ಲಿ ರಸ್ತೆಗಳಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಅರ್ಥ ಆಗ್ತಾ ಇಲ್ಲ. ರಾಜ್ಯದಲ್ಲಿರುವ ಬಹುತೇಕ ರಸ್ತೆಗಳು ಮರಣದ ಕೂಪಗಳಿವೆ. ಇಷ್ಟಾದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ ತೋರಿದೆ, ಎಂದು ದೂರಿದರು.
ಇದು ಬ್ರ್ಯಾಂಡ್ ಅಲ್ಲ, ಬ್ಯಾಡ್ ಬೆಂಗಳೂರು. ಗ್ಯಾರಂಟಿಯಿಂದಾಗಿ ರಾಜ್ಯ ಪಾಪರ್ ಆಗಿದೆ, ಅವರ ಬಳಿ ಹಣ ಇಲ್ಲ. ಹಾಗಾಗಿ, ಎಲ್ಲೆಲ್ಲಿ ರಸ್ತೆಗುಂಡಿಗಳು ಇದ್ದಾವೋ, ಅಲ್ಲೇ ನಾವೇ ಮುಂದೆ ನಿಂತು ಮುಚ್ಚೋಣ, ಜನ ಸಹಕಾರ ಮಾಡಿ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಮನೆಯ ಮುಂದೆ ಗುಂಡಿ ಇಲ್ಲವಾ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅಶೋಕ್, ಶಿವಕುಮಾರ್ ಅವರೇ ಬ್ಯಾಟರಿ ತೆಗೆದುಕೊಂಡು ಫ್ಲೈಟ್ ಹತ್ತಿ, ಅಮೆರಿಕಾಕ್ಕೆ ಹೋಗಿ ಟ್ರಂಪ್ ಮನೆ ಮುಂದೆ ಗುಂಡಿ ಇದ್ಯಾ ನೋಡಿಕೊಂಡು ಬನ್ನಿ ಎಂದು ಡಿಸಿಎಂ ವಿರುದ್ಧ ಅಶೋಕ್ ಕಿಡಿಕಾರಿದ್ರು. ಮೊದಲು ನಿಮ್ಮ ಮನೆ ನೋಡ್ರಪ್ಪಾ, ಮೋದಿ, ಟ್ರಂಪ್ ಏನ್ ಮಾಡ್ತಿದ್ದಾರೆ ಅಂತ ನೋಡಲು ನಿಮ್ಮನ್ನು ಅಧಿಕಾರದಲ್ಲಿ ಇಟ್ಟಿಲ್ಲ. ನಿಮ್ಮ ಬಳಿ ಹಣ ಇಲ್ಲ ಅಂದ್ರೆ ಓಪನ್ ಆಗಿ ಡಿಕ್ಲೇರ್ ಮಾಡಿ. ಮುಚ್ಚಿರುವ ಗುಂಡಿ ಲೆಕ್ಕ ಹೇಳುತ್ತಿದ್ದೀರಲ್ಲ ಅಲ್ವಾ, ತೆರೆದಿರುವ ಗುಂಡಿಗಳ ಬಗ್ಗೆ ಹೇಳಿ. ಸಾವಿರ ಗುಂಡಿ ಮುಚ್ಚಿದ್ರೆ ಮರುದಿನ ಅದೇ ಸಾವಿರ ಗುಂಡಿ ಓಪನ್ ಆಗುತ್ತದೆ. ಇದು ಕಳ್ಳ ಪೊಲೀಸ್ ಆಟದ ರೀತಿ ಇದೆ.
ನೀವು 5000 ಕೋಟಿ ಡಾಂಬರೀಕರಣ ಮಾಡಿದ್ರೆ ಗುಂಡಿಗಳು ಯಾಕೆ ಬೀಳುತ್ತಿತ್ತು? ನೀವು ಕಳಪೆ ಕಾಮಗಾರಿ ಮಾಡಿದ್ದೀರಿ ಅದಕ್ಕೆ ಗುಂಡಿ ಬಿದ್ದಿದೆ, ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ರಸ್ತೆ ಹದಗೆಟ್ಟಿರುವ ಪರಿಸ್ಥಿತಿಯ ಕುರಿತು ಮಂಗಳವಾರ ಮಾತನಾಡಿದ ಶಿವಕುಮಾರ್ ದೇಶದೆಲ್ಲೆಡೆ ರಸ್ತೆ ಗುಂಡಿಗಳಿದ್ದು, ಕರ್ನಾಟಕವನ್ನೇ ದೊಡ್ಡದಾಗಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನ ಹದಗೆಟ್ಟ ರಸ್ತೆಗುಂಡಿಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಶಿವಕುಮಾರ್ ದೂಷಿಸಿದ್ದಾರೆ.
ಇತ್ತೀಚೆಗೆ, ಬೆಂಗಳೂರು ಪೂರ್ವ ನಗರ ನಿಗಮದ ವ್ಯಾಪ್ತಿಗೆ ಬರುವ ವರ್ತೂರು, ಗುಂಜೂರು, ಸರ್ಜಾಪುರ, ಬೆಳ್ಳಂದೂರು, ಬಳಗೆರೆ, ಪಾಣತ್ತೂರು ಮತ್ತು ಬೆಂಗಳೂರಿನ ಐಟಿ ಬೆಲ್ಟ್, ಮಹದೇವಪುರದ ಇತರ ಭಾಗಗಳ ನಿವಾಸಿಗಳು, ಸರ್ಕಾರವು ರಸ್ತೆಗಳನ್ನು ದುರಸ್ತಿ ಮಾಡಿ ಸಮಸ್ಯೆಯಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ಮಾನವ ಸರಪಳಿಯನ್ನು ರಚಿಸಿ ಗಮನ ಸೆಳೆದಿದ್ದರು.