Wednesday, September 24, 2025
Menu

ಅಂಗವಿಕಲ ಕೋಟಾದಡಿ ಮೆಡಿಕಲ್‌ ಸೀಟ್‌ಗಾಗಿ ನಕಲಿ ದಾಖಲೆ ಸೃಷ್ಟಿಸಿ ಮಾರಿದ ಇಬ್ಬರು ವೈದ್ಯರು ಅರೆಸ್ಟ್‌

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಕಲಿ ವೈದ್ಯಕೀಯ ದಾಖಲೆ ಸಲ್ಲಿಸಿ, ಅಂಗವಿಕಲ ಮೀಸಲು ಕೋಟಾದಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು 21 ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿದ ಆರೋಪ ಮೇಲೆ ಇಬ್ಬರು ಸರ್ಕಾರಿ ವೈದ್ಯರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಂದಿನಿ ಲೇಔಟ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಭರ್ಮಪ್ಪ ಕೆಬಿ (50), ವಿಜಯನಗರ ಜಿಲ್ಲೆಯ ಹೊಸಪೇಟೆಯ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಕೊಪ್ಪಳ ಮೂಲದ ಡಿಜೆ ಸುಧಾಕರ್, ಹೊಸಪೇಟೆಯ ಎಫ್‌ಡಿಎ ಉಮೇಶ್ ನಾಗಪ್ಪ ಚೌಧರಿ, ಆಡಳಿತ ವೈದ್ಯಾಧಿಕಾರಿ (ಎಎಂಒ) ಡಾ. ಹರಿಪ್ರಸಾದ್ ಮತ್ತು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಎಂಬವರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಪ್ರಮಾಣಪತ್ರಗಳನ್ನು ನೀಡಲು ಪ್ರತಿ ಅಭ್ಯರ್ಥಿಗೆ 5-10 ಲಕ್ಷ ರೂ. ಶುಲ್ಕ ವಿಧಿಸಿದ್ದಾರೆ. ಅಭ್ಯರ್ಥಿಗಳು ವೈದ್ಯಕೀಯ ಸೀಟುಗಳಿಗೆ ಅರ್ಜಿ ಸಲ್ಲಿಸುವಾಗ ಅಂಗವಿಕಲ ಕೋಟಾ ಆಯ್ಕೆ ಮಾಡದಿದ್ದರೂ ಆನ್‌ಲೈನ್ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಶ್ರವಣದೋಷವಿದೆ ಎಂದು ಹೇಳಿಕೊಂಡು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೆಇಎ ನಿಯಮಗಳಂತೆ ಜುಲೈ 17 ರಂದು ವಿಕ್ಟೋರಿಯಾ ಆಸ್ಪತ್ರೆ ಮತ್ತು ನಿಮ್ಹಾನ್ಸ್‌ಗೆ ಆಡಿಯೋಗ್ರಾಮ್ ಮತ್ತು ಬೆರಾ (ಬ್ರೈನ್‌ಸ್ಟೆಮ್ ಆಡಿಟರಿ ಎವೋಕ್ಡ್ ರೆಸ್ಪಾನ್ಸ್) ಪರೀಕ್ಷೆಗೆ ಒಳಪಡಿಸಲು ಕಳುಹಿಸಲಾಗಿತ್ತು. ಅಲ್ಲಿ ವೈದ್ಯರು ಅಭ್ಯರ್ಥಿಗಳು ಸಲ್ಲಿಸಿದ ಆಡಿಯೋಲಾಜಿಕಲ್ ಮೌಲ್ಯಮಾಪನ ವರದಿಗಳು ಅಧಿಕೃತವಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ನಂತರ 21 ಅಭ್ಯರ್ಥಿಗಳಿಗೆ ದಾಖಲೆಗಳನ್ನು ಸಲ್ಲಿಸಲು ನೋಟಿಸ್ ಜಾರಿ ಮಾಡಲಾಗಿದೆ.

ನೋಟಿಸ್ ನೀಡಿದ ಬಳಿಕ ಮೂವರು ವಿದ್ಯಾರ್ಥಿಗಳ ಪೋಷಕರು ವಿಚಾರಣೆಗೆ ಹಾಜರಾಗಿ ನಕಲಿ ಪ್ರಮಾಣಪತ್ರ ಕುರಿತು ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಕೆಇಎ ಆಡಳಿತ ಅಧಿಕಾರಿಯೊಬ್ಬರು 21 ವಿದ್ಯಾರ್ಥಿಗಳು ಸೇರಿದಂತೆ 24 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಆರ್. ಜಗದೀಶ್ ಮತ್ತು ಅವರ ತಂಡ ತನಿಖೆ ಪ್ರಾರಂಭಿಸಿದ್ದು, ಭರ್ಮಪ್ಪ ಈ ದಂಧೆಯ ಪ್ರಮುಖ ಆರೋಪಿ ಎಂದು ಪತ್ತೆ ಹಚ್ಚಿದೆ. ಚಿತ್ರದುರ್ಗದ ಈತ ಸುಧಾಕರ್ ಮತ್ತು ಉಮೇಶ್ ಜೊತೆ ಸಂಪರ್ಕ ಹೊಂದಿದ್ದ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಮಿಷನ್ ಆಧಾರದ ಮೇಲೆ ನಕಲಿ ಪ್ರಮಾಣಪತ್ರಗಳಿಗೆ ವೈದ್ಯರ ಸಹಿ ಪಡೆಯುತ್ತಿದ್ದ.

ಭರ್ಮಪ್ಪ ನಕಲಿ ಪ್ರಮಾಣಪತ್ರ ನೀಡಲು ಅಭ್ಯರ್ಥಿಗಳಿಗೆ 5-10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾನೆ, 2-5 ಲಕ್ಷ ರೂ.ಗಳವರೆಗೆ ಮುಂಗಡ ಸಂಗ್ರಹಿಸಿದ್ದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ವೈದ್ಯರು ಸೇರಿದಂತೆ ಐವರು ಭಾಗಿಯಾಗಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *